ಕೋಲಾರ:ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಸೇವನೆ ಮಾಡಿ ಮೂವರು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಇದೇ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ಕುಡಿಯುವ ನೀರಿಗೆ ವಿಷ ಪೂರಿತ ಪುಡಿ ಮಿಶ್ರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಲೇ ವಸತಿ ಶಾಲೆಯ ಮೂರು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಿಂದ ವಿದ್ಯಾರ್ಥಿಯ ಕೃತ್ಯ ಬಯಲು ಮಾಡಿದ್ದಾರೆ.
ಸೋಮವಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಗಡಿಯಲ್ಲಿರುವ ದೊಡ್ಡಪೊನ್ನಾಂಡಹಳ್ಳಿ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿಯ ಇಬ್ಬರು ಮತ್ತು 9ನೇ ತರಗತಿ ಓರ್ವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರಾಗಿದ್ದ ಮೂವರು ವಿದ್ಯಾರ್ಥಿಗಳಿಗೆ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಪ್ರಾಣಕ್ಕೆ ತೊಂದರೆ ಇಲ್ಲ ಎಂದು ವೈದ್ಯರು ಕೂಡ ದೃಢಪಡಿಸಿದ್ದಾರೆ. ಕುಡಿಯುವ ನೀರಿನಲ್ಲಿ ವಿಷ ಪೂರಿತ ಪುಡಿ ಮಿಶ್ರಣ ಮಾಡಿರುವ ಕುರಿತು ಸಂಶಯಗೊಂಡು ವಿಚಾರಣೆ ನಡೆಸಿದ ಕಾಮಸಮುದ್ರ ಪೊಲೀಸರು, ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಸಹ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಹಾಸ್ಟೆಲ್ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ವಿದ್ಯಾರ್ಥಿಗಳಿಂದ ವಿಜಯಪುರ ಡಿಸಿ ಮನೆಗೆ ಮುತ್ತಿಗೆ