ಕೋಲಾರ:ಭಾರಿ ಮಳೆಯಿಂದ ನೀರು ತುಂಬಿಕೊಂಡಿದ್ದ ರೈಲ್ವೇ ಅಂಡರ್ ಪಾಸ್ನ ಕಾಲುವೆಗೆ ಈಜಲು ಇಳಿದು ಮೂವರು ಮಕ್ಕಳು ಜೀವ ಕಳೆದುಕೊಂಡ ದಾರುಣ ಘಟನೆ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ನಡೆದಿದೆ.
8 ವರ್ಷದ ಬಾಲಕಿ ರುಕ್ಸರ್, 10 ವರ್ಷದ ಸಾಧಿಕ್ ಹಾಗೂ 7 ವರ್ಷದ ಫಯಾಜ್ ಮೃತಪಟ್ಟಿರುವ ಮಕ್ಕಳು. ಕಳೆದ ರಾತ್ರಿ ಬಂಗಾರಪೇಟೆ ಸುತ್ತಮುತ್ತ ಭಾರಿ ಮಳೆಯಾಗಿದೆ. ಪರಿಣಾಮ ಇಲ್ಲಿನ ರೈಲ್ವೇ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು. ಅಂಡರ್ಪಾಸ್ ಪಕ್ಕದಲ್ಲೇ ನೀರು ಹೋಗಲು ಕಾಲುವೆ ಮಾಡಲಾಗಿತ್ತು. ಈ ಸಂದರ್ಭ ತಮ್ಮ ಕುರಿಗಳನ್ನು ಮೇಯಿಸುತ್ತಾ ಅಲ್ಲೇ ಆಟವಾಡಿಕೊಂಡಿದ್ದ ಮಕ್ಕಳು ಈಜಲು ನೀರಿಗೆ ಇಳಿದಿದ್ದಾರೆ. ನೀರಿನ ಆಳ ಅರಿಯದ ಮಕ್ಕಳು ಪಕ್ಕದ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾರೆ.
ರೈಲ್ವೇ ಅಂಡರ್ಪಾಸ್ಗೆ ಇಳಿದು ಮೂವರು ಮಕ್ಕಳು ಸಾವು ಇತ್ತ ಮಕ್ಕಳು ಎಷ್ಟೇ ಹೊತ್ತಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಕುರಿಗಳನ್ನು ಮೇಯಿಸುತ್ತಾ ಹೊರಟ ದಾರಿಯನ್ನು ಅನುಸರಿಸಿದ ಪೋಷಕರಿಗೆ ಮಕ್ಕಳ ಬಟ್ಟೆ ಕಾಲುವೆ ಪಕ್ಕದಲ್ಲಿ ಕಾಣಿಸಿಕೊಂಡಿದೆ. ನೀರಿಗಿಳಿದು ಹುಡುಕಾಡಿದಾಗ ಮಕ್ಕಳ ಶವಗಳು ಕಾಲುವೆಯಲ್ಲಿ ಸಿಕ್ಕಿವೆ.
ಈ ಮೂವರು ಮಕ್ಕಳ ಸಾವಿಗೆ ನೇರವಾಗಿ ರೈಲ್ವೆ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವೈಜ್ಞಾನಿಕ ಅಂಡರ್ಪಾಸ್ ಕಾಮಗಾರಿಯೇ ಮಕ್ಕಳ ಸಾವಿಗೆ ಕಾರಣ ಎನ್ನಲಾಗಿದೆ. ಪ್ರತಿಬಾರಿ ಮಳೆ ಬಂದಾಗ ನೀರು ತುಂಬಿಕೊಂಡು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಅಂಡರ್ಪಾಸ್ ಪಕ್ಕದಲ್ಲಿ ಕಾಲುವೆ ಮಾಡಿ ನೀರನ್ನು ಅಲ್ಲಿಗೆ ಬಿಡಲಾಗಿತ್ತು. ಆ ನೀರಿನಲ್ಲಿ ಮಕ್ಕಳು ಆಡಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ಇಲಾಖೆ ಮೃತರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.