ಕೋಲಾರ:ಪೂಜೆಗೆ ಬಂದ ಭಕ್ತನೊರ್ವ ವಿಶೇಷ ಪೂಜೆ ಮಾಡಿಕೊಡಿ ಎಂದು ಪೂಜಾರಿಯ ಗಮನ ಬೇರೆಡೆ ಸೆಳೆದು ಚಿನ್ನದ ಸರ ಎಗರಿಸುವ ಘಟನೆ ಕೋಲಾರದಲ್ಲಿ ನಡೆದಿದೆ.
ಭಕ್ತನೆಂದು ಹೇಳಿ ಪೂಜಾರಿಗೆ ಪಂಗನಾಮ ಹಾಕಿದ ಖದೀಮ
ದೇವಸ್ಥಾನಕ್ಕೆ ಆಗಮಿಸಿದ್ದ ಕಳ್ಳನೋರ್ವ ಅರ್ಚಕರ ಚಿನ್ನದ ಸರವನ್ನೆ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಕೋಲಾರದ ಬಂಗಾರಪೇಟೆ ಪಟ್ಟಣದ ಎಲೆಮಲ್ಲಪ್ಪ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಘಟನೆ ನಡೆದಿದ್ದು, ಅರ್ಚಕ ವಿಶ್ವನಾಥ್ ಎಂಬುವವರ ಸರ ಎಗರಿಸಿದ್ದಾನೆ. ಇನ್ನೂ ದೇವಾಲಯಕ್ಕೆ ಭಕ್ತನ ಸೋಗಿನಲ್ಲಿ ಮಾಸ್ಕ್ ಧರಿಸಿಕೊಂಡು ಬಂದಿದ್ದ ವ್ಯಕ್ತಿ ನೂತನ ಅಂಗಡಿಯೊಂದನ್ನ ಆರಂಭ ಮಾಡುತ್ತಿದ್ದೇನೆ. ನನಗೆ ಅರ್ಚನೆ ಮಾಡಿಕೊಡಿ ಎಂದು ಹೇಳಿದ್ದಾನೆ. ಪೂಜೆ ಆರಂಭವಾಗುತ್ತಿದ್ದಂತೆ ಜೇಬಿನಲ್ಲಿದ್ದ ಕರವಸ್ತ್ರ ತೆಗೆದುಕೊಂಡು ಮುಖಕ್ಕೆ ಕಟ್ಟಿಕೊಂಡು ಕೃತ್ಯವೆಸಗಿದ್ದಾನೆ ಎಂದು ಅರ್ಚಕರು ಹೇಳಿದ್ದಾರೆ.
ಮಂಗಳಾರತಿ ಕೊಡುವ ವೇಳೆ ಮುಖಕ್ಕೆ ಮಂಕುಬೂದಿ ಎರಚಿರುವ ಆಸಾಮಿ ಸುಮಾರು 1 ಲಕ್ಷ ಮೌಲ್ಯದ 25 ಗ್ರಾಂ ಚಿನ್ನದ ಸರದೋಚಿ ಪರಾರಿಯಾಗಿದ್ದಾನೆ. ಇನ್ನೂ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.