ಕೋಲಾರ :ಕೊರೊನಾ ಮಹಾಮಾರಿಯಿಂದ ಎಲ್ಲೆಡೆ ಲಾಕ್ಡೌನ್ ಹೇರಲಾಗಿ ಜನ ಸಮಸ್ಯೆಗೆ ಒಳಗಾದ್ರೆ, ಇನ್ನೊಂದೆಡೆ ಸೋಂಕಿತರು ಕೋವಿಡ್-19 ಕೇಂದ್ರದಲ್ಲಿ ಬಂಧಿಯಾಗಿದ್ದರು. ಮನೆ-ಕುಟುಂಬ ಬಿಟ್ಟು ಕ್ವಾರಂಟೈನ್ ಸೆಂಟರ್ನಲ್ಲಿ ದಿನ ಕಳೆಯುವ ಪರಿಸ್ಥಿತಿ ಬಂದೊದಗಿತ್ತು.
ಇದೀಗ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿರುವ ತಾಯಿಯನ್ನು ನೋಡಲು ಮಕ್ಕಳು ಹಂಬಲಿಸಿ ಆಸ್ಪತ್ರೆ ಬಳಿ ಬಂದಿದ್ದ ದೃಶ್ಯ ಮನ ಕಲುಕುವಂತಿತ್ತು. ಅಲ್ಲದೆ ಕೋವಿಡ್-19 ಆಸ್ಪತ್ರೆ ಎದುರು ತಂದೆಯೊಂದಿಗೆ ಪುಟ್ಟ ಕಂದಮ್ಮಗಳು ತಾಯಿ ನೋಡಲು ಕಾದು ಕುಳಿತಿರೋದು ಮನ ಮುಟ್ಟುವಂತಿತ್ತು.
ಕೊರೊನಾದಿಂದ ಆಸ್ಪತ್ರೆ ಸೇರಿರುವ ತಾಯಿ ನೋಡಲು ಬಂದು ಕಣ್ಣೀರಿಟ್ಟ ಪುಟ್ಟ ಕಂದಮ್ಮಗಳು ನಿನ್ನೆ 25 ವರ್ಷದ ಕೋಲಾರ ನಗರದ ಶ್ರೀನಿವಾಸಪುರ ಟೋಲ್ಗೇಟ್ನಲ್ಲಿರುವ ಮಹಿಳೆಗೆ ಕೊರೊನಾ ದೃಢವಾಗಿದೆ. ಹಾಗಾಗಿ ವೈದ್ಯರು ಹಾಗೂ ಅಧಿಕಾರಿಗಳು ಮಹಿಳೆಯನ್ನು ಕೋಲಾರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಆದರೆ, ಮಕ್ಕಳು ತಾಯಿಯನ್ನು ನೋಡಲೇಬೇಕು ಎಂದು ಹಠ ಹಿಡಿದಿವೆ. ಆದರೆ, ವೈದ್ಯರು ಇನ್ನೂ 15 ದಿನ ಐಸೋಲೇಷನ್ ಮಾಡಬೇಕು ಎಂದು ತಿಳಿಸಿದ್ದು, ಒಂದು ಬಾರಿ ತಾಯಿ ಮುಖ ನೋಡಿಕೊಂಡು ತೆರಳಲು ತಂದೆಯೊಂದಿಗೆ ಪುಟ್ಟ ಕಂದಮ್ಮಗಳು ಆಸ್ಪತ್ರೆಗೆ ಬಂದಿದ್ದರು.
ಅಲ್ಲದೆ ತಾಯಿಯನ್ನು ಕಂಡ ಮಕ್ಕಳ ರೋಧನೆ, ಮನಕಲಕುವ ದೃಶ್ಯ ಎಂತಹವರ ಕಣ್ಣಾಲೆಗಳು ಒದ್ದೆಯಾಗುವಂತಿತ್ತು. ಇನ್ನೂ ತಾಯಿಗೂ ಸಹ ಮಕ್ಕಳ ಪರಿಸ್ಥಿತಿ ಕಂಡು ಕಣ್ಣಂಚಲ್ಲಿ ನೀರು ಬಂದಿದ್ದು ಕಂಡು ಬಂತು. ಕೋವಿಡ್-19 ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರ ನಿಷೇಧವಿರುವುದರಿಂದ ತಾಯಿ ನೋಡುವ ಭಾಗ್ಯ ಇಲ್ಲದಾಗಿತ್ತು.
ಬಳಿಕ ವೈದ್ಯರ ಬಳಿ ಮನವಿ ಮಾಡಿಕೊಂಡು ದೂರದಿಂದ ತಾಯಿಯೊಂದಿಗೆ ಮಾತನಾಡುವ ಅವಕಾಶ ದೊರಕಿತ್ತು. ತಾಯಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಕ್ಕಳಿಗೂ ಕೊರೊನಾ ಆತಂಕ ಎದುರಾಗಿದೆ. ಮಕ್ಕಳೊಂದಿಗೆ ತಂದೆಯೂ ಕೊರೊನಾ ಪರೀಕ್ಷೆಗೊಳಗಾಗಿದ್ದಾರೆ.