ಕೋಲಾರ :ಕೊರೊನಾ ಮಹಾಮಾರಿ ವಿಶ್ವಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದೆ. ದೇಶದ ಜನರನ್ನು ಚಿತ್ರ ವಿಚಿತ್ರವಾಗಿ ಹಿಂಸಿಸುತ್ತಿದೆ. ಈ ನಡುವೆ ಅಂತರ ರಾಜ್ಯದಿಂದ ನರಸಾಪುರ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಎಂದು ಬಂದಿದ್ದ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಹೊರ ರಾಜ್ಯಗಳಿಂದ ಬಂದ ಕಾರ್ಮಿಕರು ನೆಲೆಸಿದ್ದಾರೆ. ಈ ನಡುವೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜನರ ಬದುಕು ಲಾಕ್ಡೌನ್ನಿಂದಾಗಿ ಅತಂತ್ರವಾಗಿತ್ತು. ಇದನ್ನರಿತ ಜಿಲ್ಲಾಡಳಿತ ಕೈಕಾರಿಕೆಗಳ ಮುಖ್ಯಸ್ಥರ ಸಭೆ ಕರೆದು ಎಲ್ಲರಿಗೂ ರಜೆ ಸಹಿತ ಸಂಬಳ, ಜೊತೆಗೆ ಕಾರ್ಮಿಕರ ಗುತ್ತಿಗೆದಾರ ಕಂಪನಿಗೂ ಸಂಬಳ ಕಡಿತ ಮಾಡದಂತೆ ಸೂಚನೆ ನೀಡಿತ್ತು.
ವೇಮಗಲ್ ಕೈಗಾರಿಕಾ ಪ್ರದೇಶದ ಕಾರ್ಮಿಕರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಕಾರ್ಮಿಕರಿಗೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿತ್ತು. ಜೊತೆಗೆ ದಿನಕ್ಕೆ ಒಂದು ಬಾರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಸುಮಾರು ಒಂದೂವರೆ ಸಾವಿರ ಕಾರ್ಮಿಕರಿಗೆ ಲಾಕ್ಡೌನ್ ಮುಗಿವ ಮೇ-3 ರವರೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದರ ಜೊತೆಗೆ ದಾನಿಗಳೂ ಕೂಡಾ ನೆರವು ನೀಡುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಮನವಿ ಮಾಡಿದ್ರು.
ಈ ನಡುವೆಯೂ ನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಸರಿಯಾದ ಊಟ ಸಿಗುತ್ತಿಲ್ಲ. ಹಲವಾರು ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಕಾರ್ಮಿಕರು ವಾಸಿಸುವ ಕಟ್ಟಡದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಷ್ಟದ ವಿಚಾರ, ಒಂದೊಂದು ಕೊಠಡಿಗಳಲ್ಲಿ ಹೆಚ್ಚು ಹೆಚ್ಚು ಜನ ವಾಸವಿದ್ದಾರೆ ಅನ್ನೋ ದೂರುಗಳು ಕೇಳಿಬಂದಿತ್ತು.
ಈ ಹಿನ್ನೆಯಲ್ಲಿ ದೂರುಗಳ ಪಟ್ಟಿ ಹಿಡಿದುಕೊಂಡು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶೋಭಿತಾ, ತಾವೇ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಕಂಪನಿಗಳು ಸಂಬಳ ನೀಡದಿದ್ದರೆ, ತಮಗೆ ಮಾಹಿತಿ ನೀಡಲು ಮತ್ತು ದಿನಸಿ ಹಾಗೂ ಊಟಕ್ಕೆ ಸಮಸ್ಯೆಯಾದ್ರೆ ಕೂಡಲೇ ತಮಗೆ ಕರೆ ಮಾಡುವಂತೆ ತಿಳಿಸಿ, ಲಾಕ್ಡೌನ್ ನಿಯಮ ಪಾಲಿಸುವಂತೆ ಹೇಳಿದ್ದಾರೆ.