ಕೋಲಾರ:ಜಿಲ್ಲೆಯಲ್ಲಿ ಈ ಬಾರಿ 34-38 ಡಿಗ್ರಿ ತಾಪಮಾನ ದಾಖಲಾಗಿದ್ದು, ಸೆಕೆಯಿಂದ ತತ್ತರಿಸಿರುವ ಜನ ಕಲ್ಲಂಗಡಿ ಹಣ್ಣು, ಎಳನೀರು ಹಾಗೂ ಮಜ್ಜಿಗೆಯಂತಹ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ.
ಈಗಾಗಲೇ ಸೂರ್ಯನ ತಾಪ ಅಧಿಕವಾಗಿರುವುದರಿಂದ ನಗರದ ಒಳಗೆ ಹಾಗೂ ಹೊರಭಾಗದಲ್ಲಿ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್ಗಳು ತಲೆಯೆತ್ತಿವೆ. ಪರಿಣಾಮ ಬೇಸಿಗೆಯ ಜಳಕ್ಕೆ ಸಿಲುಕಿಕೊಂಡಿರುವ ಜಿಲ್ಲೆಯ ಜನ ತಂಪು ಪಾನೀಯಗಳನ್ನು ಸೇವಿಸಿ ತುಸು ಸಮಾಧಾನಗೊಳ್ಳುತ್ತಿದ್ದಾರೆ.
ತಂಪು ಪಾನೀಯಗಳ ಮೊರೆ ಹೋದ ಸಾರ್ವಜನಿಕರು ಜಿಲ್ಲೆಯಲ್ಲಿ ಈ ಬಾರಿ ಮಳೆಯಿಲ್ಲದ ಕಾರಣ ನೀರಾವರಿಯನ್ನು ನಂಬಿಕೊಂಡಿರುವ ಕೆಲವೊಂದಿಷ್ಟು ಜನ ರೈತರು ಮಾತ್ರ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಪರಿಣಾಮ ಹಣ್ಣಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ತಮಿಳುನಾಡು, ಆಂಧ್ರ ಸೇರಿದಂತೆ ಹೊರ ರಾಜ್ಯಗಳಿಂದಲೂ ಕಲ್ಲಂಗಡಿ ಹಣ್ಣು ತರಿಸಿಕೊಳ್ಳಲಾಗುತ್ತಿದೆ. ಹಾಗಾಗಿ, ಕೊಂಚ ಬೆಲೆಯೂ ಹೆಚ್ಚಾಗಿದೆ.
ಓದಿ:ಸದನದಲ್ಲಿ ಸಿದ್ದರಾಮಯ್ಯರಿಂದ ಸಿಡಿ 'ಸೌಂಡ್'ಆಯ್ತು.. ಬೊಮ್ಮಾಯಿ 'ಮ್ಯೂಟ್' ಮಾಡಲು ಯತ್ನ!
ಈಗಾಗಲೇ ಬಿಸಿಲಿನ ಪ್ರಕರತೆಗೆ ಸಿಲುಕಿರುವ ಜನ ಹಣ್ಣಿನ ಬೆಲೆ ಅಧಿಕವಾಗಿದ್ದರೂ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಹಾಗಾಗಿ, ಅಂಗಡಿ ಮಾಲೀಕರಿಗೆ ಒಳ್ಳೆಯ ವ್ಯಾಪಾರ ನಡೆಯುತ್ತಿದೆ. ಕೇವಲ ಕಲ್ಲಂಗಡಿ ಹಣ್ಣಷ್ಟೇ ಅಲ್ಲದೇ, ಎಳನೀರು, ಕಬ್ಬಿನ ಹಾಲು, ಕರ್ಬೂಜದ ಹಣ್ಣು, ಸೇರಿದಂತೆ ಐಸ್ಕ್ರೀಂನ ವ್ಯಾಪಾರ ಕೂಡಾ ಜೋರಾಗಿದೆ.