ಕೋಲಾರ: ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಆಂದೋಲನ ಮಾಡಲಾಗುವುದು ಎಂದು, ಉಳ್ಳೇರಹಳ್ಳಿಯಲ್ಲಿ ದಲಿತ ಕುಟುಂಬಕ್ಕೆ ದಂಡ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಳ್ಳೇರಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬಕ್ಕೆ ಧೈರ್ಯ ಹೇಳುವಂತಹ ಕೆಲಸ ಮಾಡಲಾಗುವುದು. ಅಲ್ಲದೇ, ಸರ್ಕಾರದಿಂದ ಅವರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳು ಅವರ ಕುಟುಂಬಕ್ಕೆ ಸಿಗುವಂತೆ ಮಾಡಲಾಗುವುದು ಎಂದರು. ಇನ್ನು ಈಗಾಗಲೇ ಜಿಲ್ಲಾಡಳಿತದಿಂದ ಜಾಗ ಮಂಜೂರು ಮಾಡಲಾಗಿದ್ದು, ಮನೆ ಕಟ್ಟಿಕೊಳ್ಳಲು ಒಂದೂವರೆ ಲಕ್ಷ ಕೊಟ್ಟಿರುವುದನ್ನ, ವಿಶೇಷ ಅನುದಾನದಡಿ ಐದು ಲಕ್ಷ ಕೊಡುವಂತೆ ಆದೇಶ ಮಾಡಲಾಗುವುದು ಎಂದು ಹೇಳಿದರು.
ಇನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಬಾಲಕನ ಉನ್ನತ ಶಿಕ್ಷಣ ಖರ್ಚುವೆಚ್ಚಗಳನ್ನ ಭರಿಸುವುದಾಗಿ ಹೇಳಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಬಹುದೊಡ್ಡ ಆಂದೋಲವನ್ನ ಪ್ರಾರಂಭಿಸಲು ಮುಂದಾಗಿದ್ದು, ಒಬ್ಬ ಮನುಷ್ಯನನ್ನ ಒಬ್ಬ ಮನಷ್ಯ ಮುಟ್ಟಲಾರದ ಪರಿಸ್ಥಿತಿ ಇರುವುದು ದುರದೃಷ್ಟ, ಹೀಗಾಗಿ ಎಲ್ಲ ದಲಿತರು ಸಮಾನವಾಗಿ ಬದುಕಲು ಅವಕಾಶ ಮಾಡಿಕೊಡಲು ಬದ್ದರಾಗಿರುತ್ತೇವೆ ಎಂದರು.