ಕೋಲಾರ : ಸಾಲಬಾಧೆಯಿಂದ ಬೇಸತ್ತು ಗುಜರಾತ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ವೊಬ್ಬರು ತಮ್ಮ ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭಯಾನಕ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ನವೆಂಬರ್ 16ರಂದು ಈ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಸಾಫ್ಟ್ವೇರ್ ಎಂಜಿನಿಯರ್ ರಾಹುಲ್ ಎಂಬುವರೇ ಮಗಳನ್ನು ಕೊಂದಿರುವ ಆರೋಪಿ. ರಾಹುಲ್ ಬೆಂಗಳೂರಿನ ಬಾಗಲೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಭವ್ಯ ಜೊತೆಗೆ ಕಳೆದ ಐದಾರು ವರ್ಷಗಳಿಂದ ವಾಸವಿದ್ದrಉ. ರಾಹುಲ್ ಮತ್ತು ಭವ್ಯಾ ದಂಪತಿಗೆ ಮೂರು ವರ್ಷದ ಮಗಳಿದ್ದಳು.
ರಾಹುಲ್ 2016 ರಿಂದ ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿ ಸಾಕಷ್ಟು ನಷ್ಟ ಅನುಭವಿಸಿದ್ದರು ಮತ್ತು ಕಳೆದ ಒಂದೂವರೆ ವರ್ಷಗಳಿಂದ ಕೆಲಸವಿಲ್ಲದೆ ಕುಳಿತಿದ್ದರು ಎಂದು ತಿಳಿದುಬಂದಿದೆ. ಈ ನಡುವೆ ನವೆಂಬರ್ 15ರಂದು ತನ್ನ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುವುದಾಗಿ ಮನೆಯಿಂದ ಹೊರಟಿದ್ದರು.
ಇನ್ನು, ಸಾಯುವ ನಿರ್ಧಾರ ಮಾಡಿ ಮನೆಯಿಂದ ಹೊರಟ ರಾಹುಲ್ ತಮ್ಮ ಮಗಳೊಂದಿಗೆ ಹೊಸಕೋಟೆ ಮಾರ್ಗವಾಗಿ ಕೋಲಾರದ ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಬಂದಿದ್ದರು. ಬಳಿಕ ತಮ್ಮ ಮಗಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅದಕ್ಕೂ ಮೊದಲು ಮಗಳನ್ನು ಬಿಗಿದಪ್ಪಿ ಉಸಿರುಗಟ್ಟಿಸಿ ಕೊಂದು, ಮಗಳೊಂದಿಗೆ ನೀರಿಗೆ ಹಾರಿದ್ದಾರೆ. ಆದರೆ ಕೆರೆ ಆಳವಿರದ ಕಾರಣ ರಾಹುಲ್ಗೆ ಸಾಯಲು ಸಾಧ್ಯವಾಗಿಲ್ಲ.
ಬಳಿಕ ಮೃತ ಮಗುವನ್ನು ಅಲ್ಲೇ ಬಿಟ್ಟು, ತಮ್ಮ ಕಾರಿನಲ್ಲಿ ಮೊಬೈಲ್, ಪರ್ಸ್, ಎಲ್ಲವನ್ನೂ ಅಲ್ಲೇ ಬಿಟ್ಟು ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ರೈಲು ಹತ್ತಿ ಹೊರಟ ರಾಹುಲ್ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ದೆಹಲಿ, ಆಗ್ರಾ ಹೀಗೆ ರೈಲಿನಲ್ಲಿ ಹಲವು ರಾಜ್ಯಗಳನ್ನು ಸುತ್ತಾಡಿದ್ದಾರೆ. ಅಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಧೈರ್ಯ ಸಾಲಲಿಲ್ಲವಂತೆ.
ಈ ನಡುವೆ ತನ್ನ ಹೆಂಡತಿ ಮನೆಯವರಿಗೆ ಕರೆ ಮಾಡಿ ಮಗಳು ಕಿಡ್ನಾಪ್ ಆಗಿರುವ ಬಗ್ಗೆ ರಾಹುಲ್ ಕಥೆ ಕಟ್ಟಿದ್ದರು. ರಾಹುಲ್ಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಆಂಧ್ರ ಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಬಂಧಿಸಿದ್ದಾರೆ. ರಾಹುಲ್ರನ್ನು ವಿಚಾರಣೆ ನಡೆಸಿದಾಗ ಪ್ರಕರಣದ ಅಸಲಿಯತ್ತು ಬಯಲಾಗಿದೆ.
ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಆನ್ ಲೈನ್ ವಂಚನೆ ಕೇಸ್.. ಯುವತಿಗೆ ಲಕ್ಷಾಂತರ ರೂಪಾಯಿ ಪಂಗನಾಮ