ಕೋಲಾರ :ಶ್ರೀನಿವಾಸ ಸಂದ್ರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯನ್ನು ನ್ಯಾಯಯುತವಾಗಿ ಮಾಡುವಂತೆ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಹಾಗೂ ಅವರ ಬೆಂಬಲಿಗರು ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕಿ ರೂಪ ಶಶಿಧರ್, ಅಧಿಕಾರಿಗಳ ಎಡವಟ್ಟಿನಿಂದ ಗೊಂದಲ ಸೃಷ್ಟಿಯಾಗಿದೆ. ಮರು ಚುನಾವಣೆಗೆ ದಿನಾಂಕ ನಿಗದಿ ಮಾಡಿ, ಚುನಾವಣೆ ನಡೆಸದೆ ಫಲಿತಾಂಶ ಪ್ರಕಟಿಸಿದ್ದಾರೆ. ಫೆಬ್ರವರಿ 9ರಂದು ಮುಂದೂಡಲಾಗಿದ್ದ ಚುನಾವಣೆ, ಇಂದು ನಡೆಯಬೇಕಿತ್ತು. ಆದರೆ, ಚುನಾವಣಾ ಪ್ರಕ್ರಿಯೆ ನಡೆಸದೆ ಹಳೆಯ ಫಲಿತಾಂಶವನ್ನೇ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿದರು.
ಓದಿ : 3 ಸಾವಿರ ಬಾಡಿಗೆ ಕೊಟ್ಟು ಟ್ರ್ಯಾಕ್ಟರ್ ತಂದಿದ್ದಾರೆ; ತಂಗಡಗಿ ವಿರುದ್ಧ ದಢೆಸೂಗೂರು ಟೀಕೆ
ಸದ್ಯ, 19 ಸದಸ್ಯ ಬಲ ಹೊಂದಿರುವ ಪಂಚಾಯತ್ನಲ್ಲಿ ಸಮಬಲ ಬಂದ ಹಿನ್ನೆಲೆ, ಮೂರು ಬಾರಿ ಮತದಾನ ಮಾಡಿಸಿದ್ದರು. ಕೊನೆಯ ಬಾರಿ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದರು.
ಶ್ರೀನಿವಾಸ ಸಂದ್ರ ಗ್ರಾ.ಪಂ ಚುನಾವಣೆ ಗೊಂದಲ ಹಾಗಾಗಿ, ಮೂರು ಬಾರಿ ಆಯ್ಕೆ ಪ್ರಕ್ರಿಯೆ ಮಾಡಿ ಲೋಪವೆಸಗಿರುವ ಅಧಿಕಾರಿ ವಿರುದ್ದ ಕ್ರಮಕೈಗೊಳ್ಳಬೇಕು ಮತ್ತು ಮರು ಚುನಾವಣೆ ನಡೆಸುವಂತೆ ಆಗ್ರಹಿಸಲಾಗಿತ್ತು. ಹಾಗಾಗಿ, ಇಂದು ಚುನಾವಣೆ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ, ಇಂದು ಚುನಾವಣೆ ನಡೆಸದ ಅಧಿಕಾರಿ ಹಳೆಯ ಫಲಿತಾಂಶವನ್ನೇ ಪ್ರಕಟಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ರೂಪ ದೂರಿದರು.
ಈ ಎಲ್ಲಾ ಆರೋಪಗಳಿಗೆ ನಯವಾಗಿಯೇ ಉತ್ತರ ನೀಡಿರುವ ನೂತನ ಕೋಲಾರ ಡಿಸಿ ಸೆಲ್ವಮಣಿ, ಎಸಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ವರದಿ ಆಧರಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.