ಕೋಲಾರ:ಕಾಂಗ್ರೆಸ್ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಸ್ವತಃ ಕೈ ನಾಯಕರೇ ಪಣ ತೊಟ್ಟಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಒಂದು ಕಡೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ, ಹಾಗೂ ಇನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಮೈತ್ರಿ ಸರ್ಕಾರವಿರುವ ಕಾರಣ ಸದ್ಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ವರವಾಗಿ ಪರಿಣಮಿಸಿದೆ. ಹೀಗಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲೋದು ಪಕ್ಕಾ ಎಂದೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಇಲ್ಲಿನ ಪರಿಸ್ಥಿತಿನೇ ಬೇರೆ ಇದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ತಿರುಗಿ ಬಿದ್ದಿರುವ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಶತಾಯಗತಾಯ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಸೋಲಿಗೆ ಪಣ ತೊಟ್ಟು ನಿಂತಿದ್ದಾರೆ.
ಪರಿಣಾಮ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮತ್ತು ಮುನಿಯಪ್ಪ ಪುತ್ರಿ ರೂಪಕಲಾ ಹೊರತುಪಡಿಸಿ ಯಾರೊಬ್ಬ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೈ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿಲ್ಲ. ಅಭ್ಯರ್ಥಿ ಮುನಿಯಪ್ಪರ ಸಂಪರ್ಕಕ್ಕೂ ಯಾರೂ ಸಿಗುತ್ತಿಲ್ಲವಂತೆ.
ಮುನಿಯಪ್ಪ ವಿರುದ್ಧ ಪ್ರಚಾರಕ್ಕಿಳಿದ ಕಾಂಗ್ರೆಸ್ ಶಾಸಕರು ವಿರೋಧಿ ಅಲೆಗೆ 'ಕೈ' ಕೆಳಗಾಗುತ್ತಾ..?
ಇನ್ನು ಈ ಬಾರಿ ಕ್ಷೇತ್ರದಲ್ಲಿ ಮುನಿಯಪ್ಪ ವಿರೋಧಿ ಅಲೆ ಮೋದಿ ಅಲೆಗಿಂತ ಜೋರಾಗಿದೆ. ಪರಿಣಾಮವಾಗಿ ಯಾರೊಬ್ಬ ನಾಯಕರು ಅಭ್ಯರ್ಥಿ ಪರ ಮತಯಾಚನೆ ಮಾಡಲು ತಯಾರಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಹಾಲಿ ಶಾಸಕ ಹೆಚ್.ನಾಗೇಶ್, ಮಾಲೂರು ಮಾಜಿ ಜೆ.ಡಿ.ಎಸ್. ಶಾಸಕ ಮಂಜುನಾಥಗೌಡ, ಕೋಲಾರ ಹಾಲಿ ಶಾಸಕ ಶ್ರೀನಿವಾಸಗೌಡ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಬಹಿರಂಗವಾಗಿಯೇ ಪ್ರಚಾರಕ್ಕಿಳಿದಿದ್ದಾರೆ.
ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಎಸ್.ಎನ್.ನಾರಾಯಣ ಸ್ವಾಮಿ, ಶಿಡ್ಲಘಟ್ಟ ವಿ.ಮುನಿಯಪ್ಪ, ತೆರೆ ಮರೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ. ಅದು ಬಿಜೆಪಿ ಅಭ್ಯರ್ಥಿ ಮಾತಿನಲ್ಲೂ ಸ್ಪಷ್ಟವಾಗಿ ಹೊರಬಂದಿದೆ. ಜೊತೆಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಒಟ್ಟಾರೆ ಕಾಂಗ್ರೆಸ್ನ ಭದ್ರಕೋಟೆ ಕೋಲಾರ ಲೋಕಸಭಾ ಕ್ಷೇತ್ರ ಕೈ ತಪ್ಪುವ ಭೀತಿಯಲ್ಲಿದೆ. ಸ್ವಪಕ್ಷೀಯರೇ ತಮ್ಮ ಅಭ್ಯರ್ಥಿಯನ್ನು ಸೋಲಿಸಲು ಪಣ ತೊಟ್ಟಿರುವುದು ಎಷ್ಟು ವರ್ಕೌಟ್ ಆಗಿದೆ ಅನ್ನೋದು ಮೇ 23ರಂದು ತಿಳಿಯಲಿದೆ.