ಕೋಲಾರ: ವಿಧಾನಸಭೆಯ ಮುಂದಿನ ಚುನಾವಣೆಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಅಂತಿಮ ಮಾಡುವುದು ಸವಾಲಾಗಿ ಪರಿಣಮಿಸಿದೆ. ಇಂದು ಕೋಲಾರದಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದರ ಕುರಿತು ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಇದರಿಂದಾಗಿ ಇಂದಿನ ಸಮಾವೇಶ ಮಹತ್ವ ಪಡೆದುಕೊಂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ ಎಂದೇ ಹೇಳಲಾಗುತ್ತಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡ್ತಾರೆ ಅನ್ನೋದು ಬಹುತೇಕ ಅಂತಿಮ ಎನ್ನಲಾಗುತ್ತಿದೆ. ನವೆಂಬರ್ 13ರಂದು ಮೊದಲ ಸುತ್ತಿನ ಪ್ರವಾಸ ಮಾಡಿದ್ದ ಸಿದ್ದರಾಮಯ್ಯ, ಇಂದು ಎರಡನೇ ಸುತ್ತಿನ ಪ್ರವಾಸ ಮಾಡಲಿದ್ದಾರೆ. ಜೊತೆಗೆ, ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡಿದ್ದು, ಇಲ್ಲೇ ಅಂತಿನ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಸಿದ್ದರಾಮಯ್ಯರ ಇಂದಿನ ಕಾರ್ಯಕ್ರಮದ ಮಾಹಿತಿ: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸೇರ್ಪಡೆ ಕಾರ್ಯಕ್ರಮ ಮುಗಿಸಿಕೊಂಡು ಬೆಳಿಗ್ಗೆ-11 ಗಂಟೆಗೆ ರಸ್ತೆ ಮೂಲಕ ನೇರವಾಗಿ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಕೋಲಾರದ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಮಹಾತ್ಮಾ ಗಾಂಧಿ, ಜವಾಹರ್ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಹಿರಿಯ ನಾಯಕರ ಭಾವಚಿತ್ರಗಳಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಕಚೇರಿಯಿಂದ ಕೋಲಾರದ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ತೆರಳಲಿದ್ದಾರೆ. ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 3.30ಕ್ಕೆ ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಕೋಲಾರ ಶಾಸಕ ಶ್ರೀನಿವಾಸಗೌಡ ಅವರ ಮನೆಯಲ್ಲಿ ಭೋಜನ ಸವಿದು, ನಂತರ ಅಲ್ಲಿಂದ ಸಿದ್ದರಾಮಯ್ಯ ಅವರು ನೇರವಾಗಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಎರಡು ಬಣಗಳ ನಡುವೆ ಭಿನ್ನಮತ ಉಂಟಾಗಿತ್ತು. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರನ್ನು ತಮ್ಮ ಮನೆಗೆ ಕರೆಸಿಕೊಂಡು ಭಿನ್ನಮತ ಶಮನ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದರು. ಆದರೂ ಇಂದಿನ ಕಾರ್ಯಕ್ರಮಕ್ಕೂ ಮೊದಲು ಸಿದ್ದರಾಮಯ್ಯ ಕೋಲಾರ ಜಿಲ್ಲಾ ಕಾಂಗ್ರೆಸ್ನ ಎರಡೂ ಗುಂಪಿನ ಮುಖಂಡರನ್ನು ಮುಖಾಮುಖಿ ಕೂರಿಸಿಕೊಂಡು ಮಾತನಾಡುವ ಕೆಲಸ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಒಂದು ಗುಂಪಿನ ಮುಖಂಡರು ಇಂದಿನ ಕಾರ್ಯಕ್ರಮಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಾದಾಮಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರಿಗೆ ಹೆಲಿಕಾಪ್ಟರ್ ಕೊಡಲು ಹಣ ಕೂಡ ಸಂಗ್ರಹಿಸುತ್ತಿದ್ದಾರೆ. ಇನ್ನು ರಾಜ್ಯದ ಹಲವು ಕಾಂಗ್ರೆಸ್ ಶಾಸಕರು ಕೂಡ ಸಿದ್ದರಾಮಯ್ಯ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಡುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಈವರೆಗೆ ತಾವು ಸ್ಪರ್ಧಿಸಬೇಕೆಂದಿರುವ ಕ್ಷೇತ್ರದ ಹೆಸರನ್ನು ಬಿಟ್ಟುಕೊಟ್ಟಿಲ್ಲ.
ಎರಡು ಕ್ಷೇತ್ರದಿಂದ ಸ್ಪರ್ಧೆ?:ಕಳೆದ ಬಾರಿ ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಆದ್ರೆ ಚಾಮುಂಡೇಶ್ವರಿಯಲ್ಲಿ ಸೋಲುಂಡು, ಬಾದಾಮಿಯಲ್ಲಿ ಗೆದ್ದಿದ್ದರು. ಬಹುಶಃ ತಮ್ಮ ರಾಜಕೀಯ ಜೀವನದ ಕೊನೆಯ ಚುನಾವಣೆ ಎದುರಿಸುತ್ತಿರುವ ಹಾಗೂ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಈ ಬಾರಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಲ್ಲುವ ಕ್ಷೇತ್ರ ಹುಡುಕಾಟದಲ್ಲಿದ್ದು, ಕಳೆದ ಬಾರಿಯಂತೆ ಈ ಬಾರಿ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕ್ಷೇತ್ರ ಹುಡುಕಾಟ ಆರಂಭ.. ಕೋಲಾರ ಜನರ ನಾಡಿಮಿಡಿತ ಅರಿತ ಸಿದ್ದರಾಮಯ್ಯ: ಕುತೂಹಲ ಹೆಚ್ಚಿಸಿದ ಸ್ಪರ್ಧೆ ಹೇಳಿಕೆ