ಕೋಲಾರ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರವನ್ನು ಕೊನೆಗೂ ಅಂತಿಮ ಮಾಡಿದ್ದಾರೆ. ಕೊಲಾರದಲ್ಲಿ ಇಂದು (ಸೋಮವಾರ) ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ತಮ್ಮ ಕ್ಷೇತ್ರವನ್ನು ಬಹಿರಂಗಪಡಿಸಿದ್ದಾರೆ. ಎಲ್ಲರೂ ಕೋಲಾರದಿಂದ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಕೆ.ಹೆಚ್.ಮುನಿಯಪ್ಪ ಸೇರಿದಂತೆ ಎಲ್ಲರೂ ಒತ್ತಾಯ ಮಾಡಿದ್ದಾರೆ.
ಕ್ಷೇತ್ರದ ಜನರು ಮುಖ್ಯ. ಆಮೇಲೆ ನಾಯಕರುಗಳು. ಜನರ ಆಶೀರ್ವಾದ ಇದ್ದರೆ, ಮಾತ್ರ ರಾಜಕೀಯದಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಆಗೋಲ್ಲ. ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದಿದ್ದೆ. ಎಲ್ಲ ಕಡೆ ಕೋಲಾರ ಕ್ಷೇತ್ರದಿಂದ ನಿಲ್ಲಬೇಕೆಂದು ಒತ್ತಾಯ ಮಾಡಿದ್ದರು. ಹಾಗಾಗಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದರು. ಪಕ್ಷದಲ್ಲಿ ಶಿಸ್ತಿರಬೇಕು, ಹಾಗಾಗಿ ಹೈಕಮಾಂಡ್ ಒಪ್ಪಿಗೆ ನೀಡಬೇಕಾಗುತ್ತದೆ. ಎಲ್ಲರಿಗೂ ಇರುವ ರೀತಿ ನನಗೂ ಪ್ರಿವಲೇಜ್ ಇದೆ. ಹೀಗಾಗಿ ಹೈಕಮಾಂಡ್ ಹೇಳಿದ ಹಾಗೆ ನಡೆದುಕೊಳ್ಳಲಾಗುತ್ತದೆ. ತಪ್ಪು ಸಂದೇಶ ಹೋಗಬಾರದು. ನಾನು ಇಲ್ಲಿ ಸ್ಪರ್ಧೆ ಮಾಡಲು ತಯಾರಿದ್ದೇನೆ. ಆದರೆ, ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದರು.
ನಾನು ಚಾಮುಂಡಿ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದೆ. ಎರಡು ಬಾರಿ ವರುಣಾ, ಒಂದು ಬಾರಿ ಬಾದಾಮಿ ಕ್ಷೇತ್ರದಿಂದ ಗೆದ್ದಿರುವೆ. ಆಗದವರು ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ, ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ನನಗೆ ಹಳೇ ಕ್ಷೇತ್ರ ವರುಣಾದಿಂದಲೂ ನಿಲ್ಲಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಬಾದಾಮಿ ದೂರ ಆಗಿದೆ. ಬರಲು ಕಷ್ಟ ಎಂದಾಗ, ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ತೆಗೆದುಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.
ಆದರೆ, ಈಗ ಮಾತು ಕೊಡುತ್ತೇನೆ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಮಾಡಬಹುದು. ಲೀಡರ್ಗಳ ಮೂಲಕ ಬರಬೇಕೆಂದು ಏನಿಲ್ಲ. ಇದು ನನ್ನ ಸಂಪ್ರದಾಯ. ಸಾಮಾನ್ಯರಲ್ಲಿ ಸಾಮಾನ್ಯರು ಸಹ ನನ್ನ ಬಳಿ ನೇರವಾಗಿ ಬಂದು ಕಷ್ಟ ಸುಖ ಹೇಳಿಕೊಳ್ಳಬಹುದು. ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾದ ಮೇಲೆ ಕೋಲಾರಕ್ಕೆ ವಿಶೇಷ ಆಧ್ಯತೆ ನೀಡುತ್ತೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.