ಕೋಲಾರ: ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಕೋಲಾರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ. ಇಲ್ಲಿನ ಪ್ರತಿಷ್ಠಿತ ಇಟಿಸಿಎಂ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ಆಡಳಿತಾಧಿಕಾರಿಯೇ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಪ್ರಕರಣ ಈ ಮೂಲಕ ಬೆಳಕಿಗೆ ಬಂದಿದೆ.
ಅಂತಿಮ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯರು ಶುಲ್ಕದ ವಿಚಾರವಾಗಿ ಮಾತನಾಡಲು ಆಡಳಿತಾಧಿಕಾರಿ ಕೊಠಡಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಜಾನ್ಸನ್ ಕುಂದಾರ್ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ತಾನು ಹೇಳಿದ ಹಾಗೆ ಕೇಳಿದರೆ ಶುಲ್ಕ ಪಾವತಿಸುವುದು ಬೇಕಿಲ್ಲ ಎಂದು ಹೇಳಿರುವುದಾಗಿ ವಿದ್ಯಾರ್ಥಿನಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.