ಕೋಲಾರ:ಕಳೆದ 15 ವರ್ಷಗಳ ಹಿಂದೆ ಕಳೆದು ಹೋದ ಮಗ ವಾಪಸ್ ಬರಲೆಂದು ವೃದ್ಧದಂಪತಿ ಗಂಗಮ್ಮ ದೇವರಿಗೆ ದೇವಾಲಯ ನಿರ್ಮಿಸಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.
ಕಾಣೆಯಾದ ಮಗನಿಗಾಗಿ ದೇವಾಲಯ ನಿರ್ಮಿಸಿ ದೇವರಿಗೆ ಪೂಜಿಸುತ್ತಿರುವ ವೃದ್ಧ ದಂಪತಿ - ದೇವರಿಗೆ ಪೂಜಿಸುತ್ತಿರುವ ವೃದ್ಧ ದಂಪತಿ
ಅಂದು ರಾಮನಿಗಾಗಿ ಶಬರಿ ಕಾದು ಕುಳಿತ್ತಿದ್ದಳು, ಇಲ್ಲಿ ರವಿಗಾಗಿ ವೃದ್ದ ದಂಪತಿ ಕಾದು ಕುಳಿತಿದ್ದಾರೆ, ಕಳೆದು ಹೋದ ತನ್ನ ಮಗ ಬರುವ ದಾರಿ ಕಾಯುತ್ತಿರುವ ಈ ದಂಪತಿ ತನ್ನ ಮಗನಿಗಾಗಿ ಸ್ಮರಿಸುತ್ತಾ ದೇವರನ್ನು ಪ್ರಾರ್ಥಿಸುತ್ತಾ ಕೊನೆಗೆ ಆ ದೇವರಿಗೆ ಒಂದು ಗುಡಿ ಕಟ್ಟಿದ್ದಾರೆ, ಆದರೆ ಕಳೆದು ಹೋದ ಮಗ ಮಾತ್ರ ವಾಪಸಾಗಿಲ್ಲ.
ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದಲ್ಲಿನ ಮುನಿಯಪ್ಪ ಹಾಗೂ ಜಯಮ್ಮ ಎಂಬ ವೃದ್ಧ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದ. ಸಂಸಾರವೂ ಚೆನ್ನಾಗೇ ಇತ್ತು, ದೇವರು ಕೊಟ್ಟಂತೆ ಒಂದಷ್ಟು ಆಸ್ತಿ ಪಾಸ್ತಿಯೂ ಇತ್ತು, ಹೀಗಿರುವಾಗಲೇ ಇದ್ದಕ್ಕಿದಂತೆ ಇವರ ಇಬ್ಬರು ಹೆಣ್ಣುಮಕ್ಕಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುನಿಯಪ್ಪ ಹಾಗೂ ಜಯಮ್ಮ ದಂಪತಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡು ನೋವಿನಲ್ಲೇ ಜೀವನ ಕಳೆಯುತ್ತಿರುವಾಗಲೇ, ಇದ್ದೊಬ್ಬ 15 ವರ್ಷದ ಮಗ ರವಿ ಮನೆ ಬಿಟ್ಟು ಹೊರಟು ಹೋದ. ದಂಪತಿ ಪೋಲೀಸ್ ಠಾಣೆಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಮಗ ಮರಳಿ ಬರಬೇಕೆಂದು ತೋಟದಲ್ಲಿ ದೇವರನ್ನು ಸ್ಮರಿಸುತ್ತಾ ಗಂಗಮ್ಮ ದೇವಾಲಯ ಹಾಗೂ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಈ ಮಧ್ಯೆ ಸುಮಾರು ವರ್ಷಗಳ ಹಿಂದೆ ಪೋನ್ ಮಾಡಿ ನಿಮ್ಮ ಮಗ ಎಂದು ಮಾತನಾಡಿದ್ದನಂತೆ ಆ ಭರವಸೆಯಿಂದಲೇ ಇಂದಲ್ಲ ನಾಳೆ ಮಗ ಬರ್ತಾನೆ. ನಾವು ಕಣ್ಣು ಮುಚ್ಚುವ ಮೊದಲು ಒಮ್ಮೆ ಆತನನ್ನು ನೋಡಿ ಜೀವ ಬಿಡುತ್ತೇವೆ ಎಂಬ ಆಸೆ ಇಟ್ಟುಕೊಂಡು ಕಳೆದ 15 ವರ್ಷಗಳಿಂದ ಮಗನು ಬರುವ ದಾರಿಯನ್ನು ಕಾಯುತ್ತಿದ್ದಾರೆ. ಇಬ್ಬರು ಪುತ್ರಿಯರ ಸಾವು, ಮಗ ಕಾಣೆಯಾಗಿರುವುದು ಇಳಿ ವಯಸ್ಸಿನ ದಂಪತಿಗೆ ಪ್ರತಿನಿತ್ಯ ಕೊರಗುತ್ತಾ ಜೀವನ ಕಳೆಯುವಂತಾಗಿದೆ.