ಸಾವರ್ಕರ್ ಅವರು ಕಟ್ಟಾ ರಾಷ್ಟ್ರ ಪ್ರೇಮಿ : ಸಚಿವ ಸುಧಾಕರ್ ಕೋಲಾರ :ಸಾವರ್ಕರ್ ಅವರು ಕಟ್ಟಾ ರಾಷ್ಟ್ರ ಪ್ರೇಮಿ ಎಂಬುದು ನಮ್ಮ ಪಕ್ಷಕ್ಕೆ ಸ್ಪಷ್ಟತೆ ಇದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಸಾವರ್ಕರ್ ಎಷ್ಟು ವರ್ಷ ಸುದೀರ್ಘವಾಗಿ ಸೆರೆ ಮನೆ ವಾಸ ಅನುಭವಿಸಿದ್ದಾರೆ ಎಂಬುದು ಅವರಿಗೆ ಗೊತ್ತಿದೆಯಾ. ಬ್ರಿಟಿಷರಿಗೆ ಅವರ ಮೇಲೆ ಪ್ರೀತಿ ಇದ್ದಿದ್ದರೆ ಅಷ್ಟು ವರ್ಷ ಕಠಿಣ ಶಿಕ್ಷೆ ಯಾಕೆ ಕೊಡುತ್ತಿದ್ದರು. ಅವರೊಬ್ಬ ದೇಶ ಪ್ರೇಮಿ, ದೇಶಕ್ಕಾಗಿ ಅವರ ಯೌವನದ ಜೀವನವನ್ನೇ ಮುಡಿಪಾಗಿಟ್ಟರು ಎಂದು ಹೇಳಿದರು.
ಕಾಂಗ್ರೆಸ್ ಹಿನ್ನೆಲೆ ಇದ್ದರೆ ಮಾತ್ರ ದೇಶದ ನಾಯಕ ಎನ್ನುವುದು ಕಾಂಗ್ರೆಸ್ಸಿನವರಿಗೆ ಫ್ಯಾಷನ್ ಆಗಿದೆ. ಈ ಹಿಂದೆ ದೊಡ್ಡ ನಾಯಕರ ಫೋಟೋಗಳನ್ನು ಹಾಕಿದ್ದಾಗ ಚರ್ಚೆ ನಡೆದಿದೆಯಾ. ಅಥವಾ ಸದನದಲ್ಲಿ ಚರ್ಚೆ ಮಂಡಿಸಿದ್ದರಾ ಎಂದು ಪ್ರಶ್ನಿಸಿದರು. ಇವರು ಸದನದ ಸಮಯ ವ್ಯರ್ಥ ಮಾಡೋದಕ್ಕೆ ಇಲ್ಲ ಸಲ್ಲದ ವಿಷಯಗಳನ್ನು ಮುಂದಿಟ್ಟಿದ್ದಾರೆ. ಆದರೆ ಈಗ ಮೇಲಿಂದ ಯಾರೋ ಹೇಳಿದ ಮೇಲೆ ಜ್ಞಾನೋದಯ ಆಗಿರಬೇಕು ಎಂದು ಟೀಕಿಸಿದರು.
ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಈ ಹಿಂದೆ ಸಿಬಿಐ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಈಗ ಯಾಕೆ ದೂರುತ್ತಿದ್ದಾರೆ. ಇನ್ನು, ಸಿಬಿಐ ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ. ಡಿಕೆಶಿಗೆ ಕಿರುಕುಳ ಕೊಟ್ಟು ರಾಜಕೀಯ ಲಾಭ ಪಡೆಯುವ ಉದ್ದೇಶ ಬಿಜೆಪಿಗೆ ಇಲ್ಲ ಎಂದರು.
ಯುಗಾದಿಗೆ ವರ್ತೂರು ಶಾಸಕರಾಗುವುದು ಖಚಿತ: ವರ್ತೂರು ಪ್ರಕಾಶ್ ಅವರ ಈ ಕಾರ್ಯಕ್ರಮ ನೋಡುತ್ತಿದ್ದರೆ ಯುಗಾದಿಗೆ ಹೊಸ ಶಾಸಕರನ್ನು ನೀವು ನೀಡುತ್ತೀರಿ ಎಂದು ಸಚಿವ ಮುನಿರತ್ನ ಹೇಳಿದರು. ಯುಗಾದಿಗೆ ಹೊಸ ಶಾಸಕರನ್ನು ನೀವು ಕೋಲಾರದಿಂದ ಕೊಡಲಿದ್ದೀರಿ. ಆ ಶಾಸಕರು ಯಾರೆಂದರೆ ವರ್ತೂರು ಪ್ರಕಾಶ್ ಎಂದರು.
ಇವರಂತಹ ಒಳ್ಳೆ ಗುಣ ಇರುವವರು ನಮಗೆ ಸಿಕ್ಕಿದ್ದಾರೆ. ಹೀಗಾಗಿ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಯುಗಾದಿಗೆ ವರ್ತೂರು ಶಾಸಕರಾಗುವುದು ಖಚಿತ ಎಂದು ಭವಿಷ್ಯ ನುಡಿದರು. ಇನ್ನು, ಅವರ ಮುಂದಿನ ಭವಿಷ್ಯಕ್ಕೆ ಏನು ಬೇಕೋ ಅದನ್ನು ನೋಡಿಕೊಳ್ಳುವುದು ಸುಧಾಕರ್ ಹಾಗೂ ನನ್ನ ಜವಾಬ್ದಾರಿ. ಹೀಗಾಗಿ ಮುಂದಿನ ರಾಜಕೀಯಕ್ಕೆ ಶುಭಾಶಯ ಕೋರಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ :ವರ್ತೂರು ಪ್ರಕಾಶ್ ಹುಟ್ಟುಹಬ್ಬ: ಬಿರಿಯಾನಿಗೆ ಮುಗಿಬಿದ್ದ ಜನರಿಗೆ ಲಾಠಿ ಏಟು