ಕೋಲಾರ: ಸಿದ್ದರಾಮಯ್ಯ ಅವರು ಹತ್ತು ಬಾರಿ ಅಲ್ಲದೆ ಐವತ್ತು ಬಾರಿ ಕೋಲಾರದಲ್ಲಿ ಸ್ಪರ್ಧಿಸಿದರೂ, ನೂರಕ್ಕೆ ನೂರರಷ್ಟು ಅವರನ್ನು ಸೋಲಿಸಿ ಮನೆಗೆ ಕಳಿಸುವುದು ಗ್ಯಾರಂಟಿ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ಇಂದು ನಗರದಲ್ಲಿ ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಸ್ಪರ್ಧೆ ಮಾಡುವ ಸಲುವಾಗಿ ರಾಜ್ಯದಲ್ಲಿ ಕ್ಷೇತ್ರ ಹುಡುಕಾಟ ಮಾಡುತ್ತಿರುವುದು ಅಂತ್ಯತ ಶೋಚನೀಯ ವಿಚಾರ. ಅಲ್ಲದೆ ಸಿಎಂ ಆಗಿದ್ದವರು ಚಾಮುಂಡೇಶ್ವರಿಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ, ಜೊತೆಗೆ ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರೆಷ್ಟೇ ತಿಪ್ಪರಲಾಗ ಹಾಕಿದರೂ ಕೋಲಾರದಲ್ಲಿ ಅವರು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.
ಇನ್ನು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಒಳಜಗಳ ಭಿನ್ನಾಭಿಪ್ರಾಯಗಳಿವೆ, ಭಾನುವಾರ ನಡೆದ ಕಾರ್ಯಕ್ರಮದಿಂದ ಕೆ.ಎಚ್. ಮುನಿಯಪ್ಪ ಬಣದವರು ಹಾಗೂ ಕೆಜಿಎಫ್ ಶಾಸಕಿ ದೂರ ಉಳಿದಿದ್ದು ಅದಕ್ಕೆ ಉದಾಹರಣೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಕೆಲವರಿಗೆ ಸೋಲುವ ಭಯ ಕಾಡುತ್ತಿರುವುದರಿಂದ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರುತ್ತಿದ್ದಾರೆ.