ಕೋಲಾರ:ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆಯಿಲ್ಲದೆ ಒಣಗಿ ಹೋಗಿದ್ದ ಜಿಲ್ಲೆಯ ಎಸ್.ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ದೃಶ್ಯ ಕಣ್ತುಂಬಿಕೊಳ್ಳಲು ತಂಡೋಪ ತಂಡವಾಗಿ ಜನರು ಆಗಮಿಸುತ್ತಿದ್ದಾರೆ.
ಹದಿನೈದು ವರ್ಷಗಳ ಬಳಿಕ ತುಂಬಿ ಹರಿಯುತ್ತಿದೆ ಎಸ್.ಅಗ್ರಹಾರ ಕೆರೆ ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ. ಅಗ್ರಹಾರ ಕೆರೆಗೆ ಸದ್ಯ ಕೆಸಿ ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿತ್ತು. ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒತ್ತಮ ಮಳೆಯಾಗಿದ್ದರಿಂದ ಸುಮಾರು 1,200 ಎಕರೆ ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ವಿಷಯ ತಿಳಿದ ಜಿಲ್ಲೆಯ ಜನರು ತಂಡೋಪ ತಂಡವಾಗಿ ಈ ದೃಶ್ಯ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.
ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ದಿಸುವ ಕೆಸಿ ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯ 75 ಕೆರೆಗಳು ತುಂಬಿವೆ. ಜಿಲ್ಲೆ ಅತಿದೊಡ್ಡ ಕೆರೆಯಾದ ಕೆರೆ ಎಸ್.ಅಗ್ರಹಾರ ಕೆರೆ ಕಳೆದ ಹದಿನೈದು ವರ್ಷಗಳ ಬಳಿಕ ತುಂಬಿ ಹರಿಯುತ್ತಿದೆ. ಹೀಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ಕೃಷ್ಣಬೈರೇಗೌಡ, ಸಂಸದ ಮುನಿಸ್ವಾಮಿ ಹೀಗೆ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಆಗಮಿಸಿ, ಅಗ್ರಹಾರ ಕೆರೆಗೆ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ಈ ಕೆರೆಯನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಬೇಕು. ಜೊತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಮರು ಬಳಕೆ ಮಾಡುತ್ತಿರುವ ಯೋಜನೆ ದೇಶಕ್ಕೆ ಮಾದರಿ ಎಂದರು.
ಒಟ್ಟಾರೆ ಬರದನಾಡು ಕೋಲಾರಕ್ಕೆ ಕೆಸಿ ವ್ಯಾಲಿ ಯೋಜನೆ ನೀರು ವರವಾಗಿ ಪರಿಣಮಿಸಿದ್ದು, ಯೋಜನೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ.