ಕೋಲಾರ: ಮೊರಾರ್ಜಿ ದೇಸಾಯಿ ಸರ್ಕಾರಿ ವಸತಿ ಶಾಲೆಗಳಲ್ಲಿ 'ರಾಷ್ಟ್ರೀಯ ಚಿಂತನೆ, ಯೋಗಾಸನ ದೈಹಿಕ ಹಾಗೂ ಬೌದ್ಧಿಕ ವ್ಯಕ್ತಿತ್ವ ವಿಕಸನ ಶಿಬಿರ' ಆಯೋಜಿಸಲಾಗಿದ್ದು, ಇದು ಆರ್ಎಸ್ಎಸ್ ತಾಲೀಮು ಶಿಬಿರ ಎಂದು ಎಸ್ಎಫ್ಐ ಸಂಘಟನೆ ಆರೋಪಿಸಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೂತಾಂಡ್ಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಶಿಬಿರಿ ಆಯೋಜಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಕೋಲಾರ ಮತ್ತು ಉತ್ತರ ಕನ್ನಡ, ಬೀದರ್ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರ್ಎಸ್ಎಸ್ ತರಬೇತಿ ಶಿಬಿರ ನಡೆಸಲು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ ಶಿಫಾರಸ್ಸು ಮಾಡಿ ಅನುಮತಿ ನೀಡಿದ್ದಾರೆ. ಇದು ಶಿಕ್ಷಣ ಕೇಸರೀಕರಣದ ಭಾಗವಾಗಿದೆ. ಸರ್ಕಾರಿ ಶಾಲೆಗಳನ್ನು ಆರ್ಎಸ್ಎಸ್ಗೆ ಬಿಟ್ಟು ಕೊಡುವುದು ಅಪಾಯಕಾರಿಯಾಗಿದೆ. ರಾಜ್ಯ ಸರ್ಕಾರವು ಇದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.