ಕೋಲಾರ: ಒಂಟಿ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿದ್ದು ಮಾತ್ರವಲ್ಲದೇ ನಂತರ ಸರಣಿಗಳ್ಳತನ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಾಲೂರು ತಾಲೂಕಿನ ತೊಳಕನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ದರೋಡೆ ಮಾಡಿದ್ದಾರೆ.
ಗ್ರಾಮದ ಅರ್ಚಕ ದೊಡ್ಡನರಸಯ್ಯ ಎಂಬುವರ ಮನೆ ಮೇಲೆ ಆರು ಜನ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಲಾಂಗು ಮಚ್ಚು ತೋರಿಸಿ ಅರ್ಚಕ ಹಾಗೂ ಅರ್ಚಕನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ನಗನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ. ಇನ್ನು ಗಾಯಗೊಂಡ ಅರ್ಚಕ ಹಾಗೂ ಅವರ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ಮಾರ್ಗ ಮಧ್ಯೆ ಯಟ್ಟಕೋಡಿ ಗ್ರಾಮದ ಬಳಿ ಇರುವ ಮೂರು ಅಂಗಡಿಗಳಿಗೆ ನುಗ್ಗಿ ಮೂರು ಅಂಗಡಿಯಲ್ಲಿದ್ದ ಸುಮಾರು 15 ಲಕ್ಷ ಮೌಲ್ಯದ ಗುಟ್ಕಾ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು, ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದರೆ, ಮಾಲೂರು ಪೊಲೀಸ್ ಠಾಣೆಯಲ್ಲಿ ಸರಣಿಗಳ್ಳತನ ಪ್ರಕರಣ ದಾಖಲಾಗಿದೆ.