ಕೋಲಾರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆಸರು ಗದ್ದೆಗಳಾಂತಗಿದ್ದು, ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರ ಸೇರಿ ಜಿಲ್ಲೆಯ ಬಹುತೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತೆ ಹಾಳಾಗಿದ್ದು, ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಮೃತ್ಯುಕೂಪವಾಗಿವೆ. ಹಲವೆಡೆ ರಸ್ತೆಗಳನ್ನು ಅಮೃತ್ ಸಿಟಿ ಯೋಜನೆಗೆ ಅಗೆದಿರುವುದರಿಂದ ಕೆಸರು ಗದ್ದೆಗಳಾಂತಗಿವೆ. ಇದರ ಮಧ್ಯೆ ಕೆಲವೆಡೆ ನೀರು ತುಂಬಿಕೊಂಡು ರಸ್ತೆಗಳೇ ಕಾಣದಂತಾಗಿವೆ. ರಸ್ತೆಯಲ್ಲಿ ಹೆಜ್ಜೆ-ಹೆಜ್ಜೆಗೂ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಈ ಹೊಂಡಗಳನ್ನು ತಪ್ಪಿಸಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ರೈತ ಸಂಘದ ಕಾರ್ಯಕರ್ತರು ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಿಗೆ ಬಾಗಿನ ಅರ್ಪಿಸಿ, ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.