ಕೋಲಾರ: ಸರ್ವೇ ಮಾಡುವ ವಿಚಾರಕ್ಕೆ ಗೊಂದಲ ಏರ್ಪಟ್ಟು ನಿವೃತ್ತ ಶಿಕ್ಷಕನೋರ್ವ ತಹಶೀಲ್ದಾರ್ಗೆ ಚಾಕುವಿನಿಂದ ಇರಿದ ಪರಿಣಾಮ ತಹಶೀಲ್ದಾರ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಂಗಾರಪೇಟೆ ತಾಲೂಕಿನ ದೊಡ್ಡಕಳವಂಚಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ವೆಂಕಟಪತಿ ಎಂಬಾತ ತಹಶೀಲ್ದಾರ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇನ್ನು ಬಂಗಾರಪೇಟೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಮೌಳೇಶ್ವರ ಎಂಬುವರಿಗೆ ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ತಹಶೀಲ್ದಾರ್ನ ಕೊಲೆ ಮಾಡಿ ಪರಾರಿಯಾದ ನಿವೃತ್ತ ಶಿಕ್ಷಕ ಪ್ರಕರಣ ಹಿನ್ನೆಲೆ:
ದೊಡ್ಡಕಳವಂಕಿ ಗ್ರಾಮದ ಆರೋಪಿ, ನಿವೃತ್ತ ಶಿಕ್ಷಕ ವೆಂಕಟಪತಿ ಎಂಬಾತ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಈ ಸಂಬಂಧ ಸರ್ವೇ ಮಾಡಲು ಹೋದ ವೇಳೆ ತಹಶೀಲ್ದಾರ್ಗೆ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.
ತಕ್ಷಣ ತಹಶೀಲ್ದಾರ್ರನ್ನು ಕಾರಿನಲ್ಲಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಜಾಲಪ್ಪ ಅಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಕಾರ್ತಿಕ್ ರೆಡ್ಡಿ, ಮೊಹಮದ್ ಸುಜಿತ ಅವರು ಭೇಟಿ ನೀಡಿದ್ದರು.
ಮೃತ ತಹಶೀಲ್ದಾರ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವರಾಗಿದ್ದಾರೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಈ ಘಟನೆ ಕುರಿತು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.