ಕೋಲಾರ:ಕಳೆದ ಕೆಲವು ತಿಂಗಳಿನಿಂದ ತರಕಾರಿ ಹಾಗೂ ಟೊಮ್ಯಾಟೊಗೆ ಒಳ್ಳೆಯ ಬೆಲೆ ಬಂದಿತ್ತು. ಒಂದು ಬಾಕ್ಸ್ ಟೊಮ್ಯಾಟೋ 600-700 ರೂಪಾಯಿ ಇತ್ತು. ಆದ್ರೀಗ ಏಕಾಏಕಿ ಟೊಮ್ಯಾಟೊ ಬೆಲೆ ಕುಸಿದಿದ್ದು, ಒಂದು ಬಾಕ್ಸ್ 200 ರಿಂದ 250 ರೂ. ಆಗಿದೆ.
ವರುಣನ ಅಬ್ಬರ: ಕುಸಿದ ಟೊಮ್ಯಾಟೊ ಬೆಲೆ
ಮಾರುಕಟ್ಟೆ ಸುತ್ತಲೂ ಸಾಲುಗಟ್ಟಿ ನಿಂತಿರುವ ಹೊರ ರಾಜ್ಯದ ಲಾರಿಗಳು, ಲಾರಿಗಳಲ್ಲೇ ಕಾಳ ಕಳೆಯುತ್ತಿರುವ ಡ್ರೈವರ್ಗಳು. ಮಾರುಕಟ್ಟೆ ಒಳಗೆ ನಡೆಯುತ್ತಿರುವ ಟೊಮ್ಯಾಟೊ ಹರಾಜು ಪ್ರಕ್ರಿಯೆ. ಇದೆಲ್ಲಾ ಕಂಡು ಬಂದಿದ್ದು ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಕೋಲಾರದಲ್ಲಿ.
ಕಳೆದೊಂದು ವಾರದಿಂದ ಉತ್ತರ ಭಾರತದಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಬೆಂಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. ಹೀಗಾಗಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರಿಯಾನ, ರಾಜಾಸ್ತಾನ ದೆಹಲಿ ಸಂಪರ್ಕ ಕಲ್ಪಿಸುವ ರಸ್ತೆಗಳು, ಸೇತುವೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಇದರ ಪರಿಣಾಮ ಕೋಲಾರದಲ್ಲಿ ಬೆಳೆದ ಟೊಮ್ಯಾಟೊ ಸೇರಿದಂತೆ ತರಕಾರಿ ಬೆಳೆಗಳನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡಲು ಅನ್ಯ ಮಾರ್ಗವಿಲ್ಲದೆ, ಶೇಕಡಾ ಅರ್ಧದಷ್ಟು ಬೆಲೆ ಕುಸಿತ ಕಂಡಿದೆ. ಅಂದ್ರೆ 600-700 ರೂಪಾಯಿ ಇದ್ದ ಟೊಮ್ಯಾಟೊ ಏಕಾ ಏಕಿ ಈಗ 200-250 ರೂಪಾಯಿಗೆ ಕುಸಿದಿದೆ.
ಪ್ರತಿವರ್ಷ ಬಹುತೇಕ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಟೊಮ್ಯಾಟೊ ಬೆಳೆದ ರೈತರಿಗೆ ಸುಗ್ಗಿ ಕಾಲದಂತೆ ಇರುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ಮಹಾಮಾರಿಯಿಂದ ಬೆಳೆದ ಬೆಳೆಗಳಿಗೆ ಸರಿಯಾದ ಬೇಡಿಕೆ ಇಲ್ಲದೆ, ಹೊರ ರಾಜ್ಯಗಳಿಗೆ ಸಾಗಾಟ ಮಾಡಲಾಗದೆ ರೈತರು ತತ್ತರಿಸಿದ್ರು.