ಕೋಲಾರ/ಮೈಸೂರು:ರಾಜ್ಯದಲ್ಲಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಲಗ್ಗೆಯಿಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಹ ಮೈಸೂರು, ರಾಮನಗರ, ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿ ಚುನಾವಣೆಯ ರಣಕಹಳೆಯನ್ನು ಮೊಳಗಲಿಸಲು ಮುಂದಾಗಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಚುನಾವಣೆ ಪ್ರಚಾರ ಸಭೆಯನ್ನು ಕೋಲಾರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ ಇಂದು ಹಮ್ಮಿಕೊಳ್ಳಲಾಗಿದೆ. 150 ಎಕರೆ ಪ್ರದೇಶದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಸುಮಾರು 14 ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮುಖಾಂತರ 1 ಗಂಟೆಗೆ ಕೋಲಾರಕ್ಕೆ ಆಗಮಿಸಲಿದ್ದು, ನಂತರ 1 ಗಂಟೆ 10 ನಿಮಿಷಗಳ ಕಾಲ ಜನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು 2008ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ ಬಿಜೆಪಿಗೆ ಮೂರು ಶಾಸಕರನ್ನು ನೀಡಿತ್ತು. ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್ ಮತ್ತು ಮಾಲೂರು ಕ್ಷೇತ್ರದಲ್ಲಿ ತನ್ನ ಅಧಿಪತ್ಯ ಸಾಧಿಸಿದ್ದ ಬಿಜೆಪಿ ಈಗ ಮತ್ತೊಮ್ಮೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಹವಣಿಸುತ್ತಿದೆ.
ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಷ್ಟೀಯ ನಾಯಕರು ಈಗ ಪ್ರಧಾನಿಯವರನ್ನೇ ಜಿಲ್ಲೆಗೆ ಕರೆತರುತ್ತಿದ್ದಾರೆ. ಬೃಹತ್ ಸಮಾವೇಶದ ಮೂಲಕ ಜಿಲ್ಲೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ.
ಇನ್ನು ಚಿನ್ನದ ನಾಡಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ಕೊಡುಗೆಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು. ಸುಮಾರು 3.5 ಅಡಿಯ 30 ಕೆಜಿಯ ಬುದ್ಧನ ಪ್ರತಿಮೆಯನ್ನು ನೀಡಲಾಗುತ್ತಿದೆ.