ಕೋಲಾರ:ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿದೆ. ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು, ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ.
ಕೋಲಾರ ಜಿಲ್ಲೆ ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವನ್ನು ಹೊಂದಿದೆ. ಆದ್ರೆ ಚಿನ್ನ ಬರಿದಾಗಿ ಎರಡು ದಶಕಗಳೇ ಕಳೆದಿವೆ, ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರ್ಕಾರಗಳು ನಾನಾ ಯೋಜನೆಗಳನ್ನ ಜಾರಿ ಮಾಡುವ ಭರವಸೆಗಳನ್ನ ನೀಡುತ್ತಾ ಕಣ್ಣೊರೆಸುವ ತಂತ್ರ ಮಾಡಿಕೊಂಡು ಬಂದಿದ್ದು, ಇದುವರೆಗೂ ಕೆಜಿಎಫ್ ಗಣಿ ಪುನಾರಂಭ ಆಗಲೇ ಇಲ್ಲ. ಸದ್ಯ ಸರ್ಕಾರ ಕೈಗಾರಿಕಾ ಟೌನ್ ಶಿಫ್ ಮತ್ತು ಚಿನ್ನದ ಗಣಿ ಮತ್ತೆ ಓಪನ್ ಮಾಡಲು ಮುಂದಾಗಿದೆ.
ಈಗಾಗಲೇ ಚಿನ್ನದ ನಿಕ್ಷೇಪಗಳು ಎಲ್ಲೆಲ್ಲಿ ಇದೆ. ಅದರಲ್ಲಿ ಚಿನ್ನದ ಸಾಂದ್ರತೆ ಎಷ್ಟಿದೆ ಅನ್ನೋದನ್ನು ಪರೀಕ್ಷೆ ನಡೆಸಿದ್ದ ಗಣಿ ಇಲಾಖೆ ಈಗ ಮತ್ತೆ ಚಿನ್ನವನ್ನು ಬೇರ್ಪಡಿಸಿ ಹಾಕಲಾಗಿದ್ದ ಸೈನೆಡ್ ಗುಡ್ಡಗಳಲ್ಲಿ ಚಿನ್ನದ ಅಂಶ ಎಷ್ಟಿದೆ ಅನ್ನೋದನ್ನ ಪರೀಕ್ಷೆ ನಡೆಸಲು ಮುಂದಾಗಿದೆ. ಮೂರನೇ ಹಂತದ ಸೈನೈಡ್ ಗುಡ್ಡದ ಮಣ್ಣನ್ನು ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಮಣ್ಣು ಮತ್ತು ಖನೀಜ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮಿನರಲ್ ಎಕ್ಸ್ ಪ್ಲರೇಷನ್ ಕಾರ್ಪೋರೇಷನ್ ಲಿಮಿಟೆಡ್ ಅಧಿಕಾರಿಗಳು, ಭಾರತ ಗೋಲ್ಡ್ ಮೈನ್ಸ್ನ ಗುತ್ತಿಗೆ ಭೂಮಿಯಲ್ಲಿ ಪರಿಶೋಧನೆ ಕಾರ್ಯದ ಪರಿವೀಕ್ಷಣೆಯನ್ನು ಮಾಡಿದ್ದಾರೆ.