ಕೋಲಾರ:ಜಿಲ್ಲೆಯಲ್ಲಿ ಮತ್ತೆ ಪೊಲೀಸರಿಂದ ಗುಂಡಿನ ಸದ್ದು ಕೇಳಿಬಂದಿದೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕೋಲಾರ ತಾಲೂಕಿನ ಸಂಗೊಂಡಹಳ್ಳಿ ನೀಲಗಿರಿ ತೋಪಿನಲ್ಲಿ ಹಾಸನ ಮೂಲದ ಸುಹೇಬ್ ಹಾಗೂ ಅಸ್ಸಾಂ ಮೂಲದ ಶ್ಯಾಮ್ ಸುಲ್ ಎಂಬ ಆರೋಪಿಗಳ ಕಾಲಿಗೆ ಗುಂಡೇಟು ನೀಡಿದ್ದಾರೆ.
ಅಕ್ಟೋಬರ್ 20ರಂದು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ತೊಳಕನಹಳ್ಳಿ ಗ್ರಾಮದ ಒಂಟಿ ಮನೆಯಲ್ಲಿದ್ದ ಅರ್ಚಕರ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಟ್ಟಿ ಹಾಕಿ ಮನೆಯಲ್ಲಿದ್ದ ನಗ, ನಾಣ್ಯ ದೋಚಿದ್ದರು. ಅಷ್ಟೇ ಅಲ್ಲ, ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಟ್ಟಕೋಡಿ ಬಳಿ ಇದ್ದ ಮೂರು ಅಂಗಡಿಗಳಲ್ಲೂ ಸರಣಿಗಳ್ಳತನ ಮಾಡಿದ್ದರು.
ಮೂರು ಅಂಗಡಿಗಳಲ್ಲಿದ್ದ ಸುಮಾರು 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಗುಟ್ಕಾವನ್ನು ದರೋಡೆಕೋರರು ಕದ್ದೊಯ್ದಿದ್ದರು. ಘಟನೆ ಸಂಬಂಧ ಮಾಸ್ತಿ ಹಾಗೂ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಸನ ಮೂಲದ ಸುಹೇಬ್ ಹಾಗೂ ಅಸ್ಸಾಂ ಮೂಲದ ಶ್ಯಾಮ್ ಎಂಬ ಅರೋಪಿಗಳನ್ನು ಬಂಧಿಸಿ, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುವಾಗ ಕೋಲಾರ ತಾಲೂಕಿನ ಸಂಗೊಂಡಹಳ್ಳಿ ಬಳಿ ಶೌಚಾಲಯಕ್ಕೆ ನಿಲ್ಲಿಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆರೋಪಿಗಳನ್ನು ಹಿಡಿಯುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮಾಸ್ತಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೇಮಂತ್, ಸಿಬ್ಬಂದಿ ನಿಖಿಲ್ ಹಾಗೂ ವಿಶ್ವನಾಥ್ಗೆ ಗಾಯಗಳಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಒಂಟಿ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ, ದರೋಡೆ.. ಅದೇ ಬೀದಿಯ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ