ಕರ್ನಾಟಕ

karnataka

ETV Bharat / state

ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾದ ಮಗು ಬಾಲಕ ನೀಡಿದ ಸುಳಿವಿನಿಂದ ಪತ್ತೆ - ಈಟಿವಿ ಭಾರತ್ ಕನ್ನಡ ಸುದ್ದಿ

ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾಗಿದ್ದ ಮಗುವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲಾರ ಜಿಲ್ಲಾಸ್ಪತ್ರೆ
ಕೋಲಾರ ಜಿಲ್ಲಾಸ್ಪತ್ರೆ

By ETV Bharat Karnataka Team

Published : Oct 27, 2023, 9:14 PM IST

ಎಸ್​ಪಿ ಎಂ.ನಾರಾಯಣ್ ಮಗು ಕಳವು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೋಲಾರ:ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿದ್ದ ಮಗುವನ್ನು ಮೂವರು ಮಹಿಳೆಯರು ಹೊತ್ತೊಯ್ದ ಪ್ರಕರಣ ಸುಖಾಂತ್ಯ ಕಂಡಿದೆ. ಮಗು ತಾಯಿ ಮಡಿಲು ಸೇರಿದೆ. ಶುಕ್ರವಾರ ಸಂಜೆ ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳ್ಳತನವಾಗಿದ್ದ ನಂದಿನಿ ಹಾಗೂ ಪುವರ್​ಸನ್ ಎಂಬವರ 4 ದಿನದ ಗಂಡುಮಗು ಸಿಕ್ಕಿದೆ.

ಕೋಲಾರ ಜಿಲ್ಲಾಸ್ಪತ್ರೆಯಿಂದ ಮೂವರು ಮಹಿಳೆಯರು ಬಂದು ಮಗುವನ್ನು ಕದ್ದು, ಬ್ಯಾಗ್​ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ಮಗುವನ್ನು ತನ್ನ ಪಕ್ಕದಲ್ಲೇ ಮಲಗಿಸಿ ತಾಯಿ ನಿದ್ರೆಗೆ ಜಾರಿದ್ದರು. ಮಗುವಿನ ಅಜ್ಜಿ ನೋಡುವಷ್ಟರಲ್ಲಿ ಮಗು ಇರಲಿಲ್ಲ. ಇದನ್ನು ಕಂಡು ಗಾಬರಿಯಾದವರಿಗೆ ನಂದಿನಿಯವರ ಅಕ್ಕನ ಮಗ ಕಾರ್ತಿಕ್​ ಎಂಬಾತ ಮಗು ಕದ್ದಿರುವ ಬಗ್ಗೆ ಹೇಳಿದ್ದಾನೆ. ಅವರು ಯಾರು?. ಎಲ್ಲಿ ಹೋದರು?. ಅನ್ನೋದನ್ನು ಅಲರ್ಟ್​ ಮಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಮಗುವಿನ ಹುಡುಕಾಟ ನಡೆಸಿದ್ದಾರೆ.

ಕೋಲಾರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ತುಣುಕುಗಳನ್ನು ಹಿಡಿದು ಶೋಧಿಸಿದ್ದರು. ಹೀಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಒಂದಷ್ಟು ಮಾಹಿತಿ ಸಿಕ್ಕಿತ್ತು. ಮಗು ಕಳ್ಳತನವಾದ ವಿಚಾರ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಷ್ಟೊತ್ತಿಗೆ ಮಗು ಕದ್ದಿದ್ದ ಮಹಿಳೆ ಕೋಲಾರದಿಂದ ಮಾಲೂರಿಗೆ ಹೋಗಿ ಮಾಲೂರಿನಿಂದ ಆಲಂಬಾಡಿವರೆಗೆ ಮಾಲೂರಿನ ನವೀನ್​ ಎಂಬವರ ಆಟೋದಲ್ಲಿ ಪ್ರಯಾಣ ಮಾಡಿದ್ದಳು.

ಆದರೆ, ಅವರನ್ನು ಆಲಂಬಾಡಿಗೆ ಬಿಟ್ಟು ಹೋದ ನಂತರ ನವೀನ್ ಜಿಲ್ಲಾಸ್ಪತ್ರೆಯಿಂದ ಮಗು ಕಳ್ಳತನವಾಗಿರುವ ಸುದ್ದಿ ಗಮನಿಸಿದ್ದರು. ಈ ವೇಳೆ ನವೀನ್​ ಅವರಿಗೆ ಮಹಿಳೆ ತನ್ನದೇ ಆಟೋದಲ್ಲಿ ಪ್ರಯಾಣ ಮಾಡಿರೋದು ಗಮನಕ್ಕೆ ಬಂದಿದೆ. ತಕ್ಷಣ ನವೀನ್​ ಮಾಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಟೋ ಬಾಡಿಗೆಯನ್ನು ಫೋನ್​ ಪೇ ಮೂಲಕ ಪಾವತಿ ಮಾಡಿದ್ದರಿಂದ ಫೋನ್​ ನಂಬರ್ ಕೂಡಾ ಸಿಕ್ಕಿತ್ತು. ಕೂಡಲೇ ಬೆನ್ನು ಹತ್ತಿದ ಪೊಲೀಸರಿಗೆ ಮಗು ಕದ್ದಿರುವ ಕಳ್ಳಿ ಮಾಲೂರಿನಿಂದ ಕೋಲಾರದತ್ತ ಬರುತ್ತಿರುವ ಮಾಹಿತಿ ಇತ್ತು.

ಅಲ್ಲದೆ ಆಲಂಬಾಡಿಯಲ್ಲಿ ಆಟೋ ಡ್ರೈವರ್ ನೀಡಿದ ಮಾಹಿತಿ ಮೇರೆಗೆ ಅವರು ತಮಿಳುನಾಡಿನತ್ತ ತೆರಳಿದ ಶಂಕೆಯೂ ಇತ್ತು. ಎರಡು ಬೇರೆ ಬೇರೆ ತಂಡಗಳಾಗಿ ಹೊರಟಾಗ ಮಧ್ಯರಾತ್ರಿ 12.30 ಸುಮಾರಿಗೆ ಮಗುವಿನೊಂದಿಗೆ ಮಗುವಿನ ಕಳ್ಳಿ ಬೈಕ್​ನಲ್ಲಿ ಕೋಲಾರದ ಎಪಿಎಂಸಿ ಯಾರ್ಡ್​ ಬಳಿ ಸಿಕ್ಕಿಬಿದ್ದಿದ್ದಾಳೆ. ಮಗುವನ್ನು ತಾಯಿಗೆ ಒಪ್ಪಿಸಿದ ಪೊಲೀಸರು ನಂತರ ಆರೋಪಿ ಶಿಲ್ಪಿ ಅಲಿಯಾಸ್​ ಶೋಭಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮಧ್ಯರಾತ್ರಿ 12.30ರ ಸುಮಾರಿಗೆ ಮಗು ಸಿಗುತ್ತಿದ್ದಂತೆ ಪೊಲೀಸರು ಮಗುವಿನ ತಾಯಿಯ ಫೋನ್​ಗೆ​ ಕರೆ ಮಾಡಿ ತಿಳಿಸಿದ್ದಾರೆ. ನಂತರ ಮಗುವನ್ನು ತಂದು ತಾಯಿಗೆ ಒಪ್ಪಿಸಿದ್ದಾರೆ. ಮಗುವನ್ನು ಕಂಡ ತಾಯಿ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಆಕ್ರಂದನ ಅಲ್ಲಿದ್ದ ಪೊಲೀಸರೂ ಸೇರಿದಂತೆ ಎಲ್ಲರ ಕಣ್ಣಾಲಿಗಳನ್ನು ತೇವವಾಗಿಸಿತ್ತು.

ಪ್ರಕರಣವನ್ನು ಕೇವಲ ಐದು ಗಂಟೆಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾದ ಕೋಲಾರ ಪೊಲೀಸರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.ಸಿಎಂ ಸಿದ್ದರಾಮಯ್ಯ ಕೂಡಾ ಎಕ್ಸ್ ಮೂಲಕ ಮಗು ಹುಡುಕಿದ ಕೋಲಾರ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೋಲಾರ ಎಸ್ಪಿ ನಾರಾಯಣ್​ ಪ್ರಕರಣ ಭೇದಿಸುವಲ್ಲಿ ಸಾಮಾಜಿಕ ಪ್ರಜ್ಞೆ ಮೆರೆದ ಆಟೋ ಡ್ರೈವರ್ ನವೀನ್​ ಹಾಗೂ ಮಗು ಕಳ್ಳತನವಾದ ತಕ್ಷಣ ಮಗುವಿನ ಹೆತ್ತವರನ್ನು ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ಎಚ್ಚರಿಸಿದ ಏಳು ವರ್ಷದ ಬಾಲಕ ಕಾರ್ತಿಕ್​ಗೆ ಅಭಿನಂದಿಸಿ, ಪ್ರಶಂಸಾ ಪತ್ರ ನೀಡಿದ್ದಾರೆ. ಪೊಲೀಸರನ್ನೂ ಅಭಿನಂದಿಸಿದ್ದಾರೆ.

ಕಳೆದು ಹೋಗಿದ್ದ ಮಗುವನ್ನು ಮರಳಿ ತನ್ನ ಮಡಿಲಿಗೆ ಸೇರಿಸಿದ ಕೋಲಾರ ಪೊಲೀಸರಿಗೆ ಹಾಗೂ ಅದಕ್ಕೆ ನೆರವಾದ ಎಲ್ಲರಿಗೂ ಮಗುವಿನ ತಾಯಿ ನಂದಿನಿ ಕೂಡಾ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:ಕೋಲಾರ: ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡೇಟು

ABOUT THE AUTHOR

...view details