ಕೋಲಾರ:ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸೋಲಿಲ್ಲದ ಸರದಾರ ಕೆ.ಹೆಚ್. ಮುನಿಯಪ್ಪ 8 ನೇ ಗೆಲುವಿಗೆ ಸ್ವಪಕ್ಷಿಯರೇ ಅಡ್ಡಗಾಲಾಗಿದ್ದಾರೆ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರು ಸೇರಿದಂತೆ ಹಲವು ಮುಖಂಡರು ಸಂಸದ ಮುನಿಯಪ್ಪ ಸ್ವರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗ್ತಿದೆ.
ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜ್ಯದ ಮಂಡ್ಯ ಹಾಗೂ ಹಾಸನ ಜಿಲ್ಲೆಯಷ್ಟೇ ಕೋಲಾರ ಲೋಕಸಭಾ ಕ್ಷೇತ್ರ ಕೂಡ ರಂಗೇರಿದೆ. ಕಾಂಗ್ರೆಸ್‍ನ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಕೆ.ಹೆಚ್. ಮುನಿಯಪ್ಪ ವಿರೋಧಿಗಳು ಪಕ್ಷಾತೀತವಾಗಿ ಒಂದಾಗಿದ್ದಾರೆ. ಏನಾದ್ರು ಮಾಡಿ ಮುನಿಯಪ್ಪಗೆ ಟಿಕೆಟ್ ತಪ್ಪಿಸಲು ಸ್ವಪಕ್ಷೀಯರೇ ಅಖಾಡಕ್ಕೆ ಇಳಿದಿದ್ದಾರೆ.
ಕಳೆದೆರೆಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ವಿಶೇಷ ಅಂದ್ರೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಶಿಢ್ಲಘಟ್ಟ ಶಾಸಕ ವಿ. ಮುನಿಯಪ್ಪ, ಮುಳಬಾಗಲು ಪಕ್ಷೇತರ ಶಾಸಕ ಹೆಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಜೆಡಿಎಸ್ನ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರು ಮುನಿಯಪ್ಪಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಈಗಾಗಲೇ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಾರಿ ಕೆ.ಹೆಚ್. ಮುನಿಯಪ್ಪಗೆ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ವಿರೋಧ ಇರುವುದರಿಂದ ಇವರ ಬದಲಿಗೆ ಮಲ್ಲಿಕಾರ್ಜುನ್ ಖರ್ಗೆಗೆ ಕೋಲಾರದಿಂದ ಟಿಕೆಟ್ ನೀಡಿ ಎಂದು ಒತ್ತಡ ಹೇರಲು ಸಿದ್ಧರಾಗಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮದಂತೆ ಕೋಲಾರ ಕಾಂಗ್ರೆಸ್ ಪಾಲಾಗಿದ್ದು, ಹಾಲಿ ಸಂಸದರಿಗೆ ಟಿಕೇಟ್ ಬಹುತೇಕ ಖಚಿತವಾಗಿದೆ. ಹಾಗಾಗಿ ಎಂದಿನಂತೆ ಹೈಕಮಾಂಡ್‍ನಿಂದ ತಮ್ಮ ಹೆಸರು ಶಿಫಾರಸು ಮಾಡಿಕೊಂಡು ಬಂದು ತಮ್ಮ ವಿರೋಧಿಗಳಿಗೆ ಟಾಂಗ್ ಕೊಡಲು ಕೆ. ಹೆಚ್. ಮುನಿಯಪ್ಪ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಆದ್ರೂ ಸಂಸದ ಕೆ.ಹೆಚ್.ಮುನಿಯಪ್ಪ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಎರಡು ತಿಂಗಳ ಹಿಂದೆಯೇ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕೆ.ಹೆಚ್. ಹಠಾವೋ ಕೋಲಾರ ಬಚಾವೋ ಕಾರ್ಯಕ್ರಮ ಹಾಗೂ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮುನಿಯಪ್ಪ ಅವರ ರಾಜಕೀಯ ವಿರೋಧಿಗಳನ್ನು ಒಂದೆಡೆ ಸೇರಿಸಿ ಬಹಿರಂಗವಾಗೇ ವಿರೋಧಿ ಬಣ ತಯಾರಿ ನಡೆಸಿತ್ತು.