ಕೋಲಾರ :ಅಗ್ನಿಪಥ್ ಯೋಜನೆ ಕುರಿತು ಇಗಾಗಲೇ ದೇಶಾದ್ಯಂತ ಬಿಗುವಿನ ವಾತವರಣ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಪ್ರತಿಭಟನಕಾರರು ವಿರೋಧಿಸುತ್ತಿದ್ದಾರೆ. ಇದನ್ನು ಖಂಡಿಸಿ ಮಾತನಾಡಿರುವ ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಅವರು, ಅಗ್ನಿಪಥ್ ಯೋಜನೆಯನ್ನ ವಿರೋಧಿಸುವವರು ದೇಶ ಪ್ರೇಮಿಗಳಲ್ಲ. ಅವರೆಲ್ಲರೂ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸುತ್ತಿರುವ ಪಕ್ಷ ಬಿಜೆಪಿ ಆಗಿದ್ದರಿಂದ ಇದರ ವಿರುದ್ಧ ವಿರೋಧ ಪಕ್ಷದವರು ಈ ರೀತಿಯ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ಸ್ವಾಗತ ಎಂದು ಸಂಸದ ಹೇಳಿಕೆ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರ ಹಿಂದೆ ಕಾರ್ಪೊರೇಟ್ ವರ್ಗದವರು, ವಿರೋಧ ಪಕ್ಷದವರು ಇದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಭದ್ರತೆ ಹಾಗೂ ಉದ್ಯೋಗ ಸೃಷ್ಟಿಸುವ ಸಲುವಾಗಿ ಅಗ್ನಿಪಥ್ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ ಬಲವಂತ ಇಲ್ಲ, ಇಚ್ಚಾನುಸಾರ ಸೇನೆಗೆ ಸೇರಲು ಅವಕಾಶ ನೀಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ರಕ್ಷಣ ಸಚಿವರು ಯಾರನ್ನೂ ಸಹ ಬಲವಂತ ಮಾಡ್ತಿಲ್ಲ, ಇಷ್ಟ ಇರುವವರಿಗೆ ಮಾತ್ರ ಸೇನೆಗೆ ಸೇರಲು ಅವಕಾಶ ಮಾಡಿಕೊಡಲಾಗಿದೆ. 18 ರಿಂದ 21 ವರ್ಷದ ಯುವಕ-ಯುವತಿಯರು ಸೇನೆಗೆ ಸೇರಬಹುದಾಗಿದೆ ಎಂದರು.