ಕೋಲಾರ: ಇಲ್ಲಿನ ಕೆಜಿಎಫ್ನ ಸ್ವರ್ಣ ನಗರದ ಗಂಗಾ ಭವಾನಿ ದೇವಾಲಯ ಬಳಿ ಚರಂಡಿ ಬಾಯ್ತೆರೆದು ಕುಳಿತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಜೀವದ ಹಂಗುತೊರೆದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿನಿತ್ಯ ನೂರಾರು ಮಂದಿ ಓಡಾಡುವ ರಸ್ತೆ ಇದಾಗಿದ್ದು, ಸ್ಪಲ್ಪ ಮೈಮರೆತು ಬೇರೆಡೆ ಕಣ್ಣಾಯಿಸಿದರೆ ಚರಂಡಿಯಲ್ಲಿ ಬಿದ್ದು ಕೈ-ಕಾಲು ಮುರಿದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಕೆಜಿಎಫ್ನ ಅಶ್ವತ್ ಲೇಔಟ್ನಿಂದ ಸ್ವರ್ಣಕುಪ್ಪಂಗೆ ಹೋಗುವ ಈ ದಾರಿಯಲ್ಲಿ ಇದೀಗ ಓಡಾಡಲು ಸಹ ಹಿಂಜರಿಯುವ ವಾತಾವರಣ ಸೃಷ್ಟಿಯಾಗಿದೆ.
ಭವಾನಿ ದೇವಾಲಯ ಬಳಿ ಬಲಿಗಾಗಿ ಬಾಯ್ತೆರೆದು ಕುಳಿತ ಚರಂಡಿ ಕಳೆದೊಂದು ವಾರದ ಹಿಂದಷ್ಟೇ ವ್ಯಕ್ತಿಯೋರ್ವ ಚರಂಡಿಗೆ ಬಿದ್ದಿದ್ರೆ, ನಿನ್ನೆ ಮಹಿಳೆಯೊಬ್ಬರು ಬಿದ್ದು ಆಸ್ಪತ್ರೆ ಪಾಲಾಗಿದ್ದರು. ತನ್ನ ಮಕ್ಕಳ ಜೊತೆ ಹೋಗುತ್ತಿದ್ದ ವೇಳೆ ಆಯತಪ್ಪಿ ಚರಂಡಿಗೆ ಬಿದ್ದಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.
ಇನ್ನು ಈ ರಸ್ತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಇದ್ದು, ಪ್ರತಿ ದಿನ ಓಡಾಡುವ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರಸ್ತೆ ದುರಸ್ತಿ ಆಗದಿರಲು ಪಕ್ಕದಲ್ಲಿರುವ ಜಮೀನು ಮಾಲೀಕರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿದ್ದು, ಇನ್ನೊಂದೆಡೆ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿಬಂದಿದೆ.
ಸದ್ಯ ನಿನ್ನೆ ನಡೆದಿರುವ ಘಟನೆಯಿಂದಾಗಿ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.