ಕೋಲಾರ:ಒಂದು ಕಾಲದಲ್ಲಿ ಕ್ಲೀನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೋಲಾರ ಇದೀಗ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ. ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನೂತನ ಸಂಸದರು ನಗರದಲ್ಲಿ ಪ್ರದಕ್ಷಿಣೆ ಹಾಕಿ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ.
ನೂತನ ಸಂಸದ ಎಸ್.ಮುನಿಸ್ವಾಮಿ ನಗರಸಭೆ ಅಧಿಕಾರಿಗಳೊಂದಿಗೆ ಬೈಕ್ನಲ್ಲಿ ನಗರ ಪ್ರದಕ್ಷಿಣೆ ಮಾಡಿ, ಕಸ ವಿಲೇವಾರಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ನಗರದ ಹೊಸ ಬಸ್ ನಿಲ್ದಾಣ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿದ ಸಂಸದರಿಗೆ ಹೋದಲ್ಲೆಲ್ಲಾ ಕಸದ ರಾಶಿಯೇ ಆಮಂತ್ರಿಸುವಂತಿತ್ತು. ಸರಿಯಾಗಿ ಕಸ ವಿಲೇವಾರಿ ಮಾಡದ್ದಕ್ಕೆ ಸ್ಥಳದಲ್ಲೇ ನಗರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಬೆಳಗ್ಗೆ ಹತ್ತು ಗಂಟೆಯೊಳಗೆ ಕಸ ವಿಲೇವಾರಿ ಮಾಡದಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳೋದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.