ಕೋಲಾರ :ಕೊಲೆ ಪ್ರಕರಣ ನಡೆದು 24 ತಾಸಿನೊಳಗೆ ಪೊಲೀಸ್ ಶ್ವಾನ ಆರೋಪಿಯನ್ನು ಪತ್ತೆ ಹಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾ ಅಪರಾಧ ವಿಭಾಗದ ರಕ್ಷಾ ಹೆಸರಿನ ಶ್ವಾನ ಆರೋಪಿಯನ್ನು ಪತ್ತೆ ಮಾಡಿದೆ.
ಮುಳಬಾಗಿಲು ತಾಲೂಕಿನ ಬೇವಹಳ್ಳಿ ಬಳಿ ಶುಕ್ರವಾರ (ಆ.11) ಸುರೇಶ್ ಎಂಬುವರ ಕೊಲೆ ನಡೆದಿತ್ತು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಪತ್ತೆಗಾಗಿ ಶ್ವಾನದಳದೊಂದಿಗೆ ಹುಡುಕಾಟ ಆರಂಭಿಸಿದ್ದರು. ಬೆರಳು ಮುದ್ರೆ ತಜ್ಞರು, ಎಫ್‌ಎಸ್‌ಎಲ್ ತಜ್ಞರನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ, ಯಾವುದೇ ಸುಳಿವು ಸಿಗದ ಪ್ರಕರಣದಲ್ಲಿ ಶ್ವಾನವು ಕೊಲೆಯ ಆರೋಪಿಯನ್ನು ಪತ್ತೆಮಾಡಿ ಸಿಬ್ಬಂದಿಗೆ ನೆರವಾಗಿದೆ.
''ನಮಗೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಕೊಲೆಯಾದ ವ್ಯಕ್ತಿಗೆ ಯಾರೊಂದಿಗೂ ಯಾವುದೇ ಹಳೆ ದ್ವೇಷವೂ ಇರಲಿಲ್ಲ. ರಾತ್ರಿ ಯಾರು ಬಂದು ಸಾಯಿಸಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಲಿಲ್ಲ. ರಾಡ್ನಿಂದ ಹೊಡೆದಿರುವಂತೆ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂನವರು ಬಂದು ಶ್ವಾನ ರಕ್ಷಾಗೆ ಮೃತನ ರಕ್ತದ ವಾಸನೆ ಹಿಡಿಸುತ್ತಾರೆ. ಅದು ಸುಮಾರು 1.5 ಕಿಲೋ ಮೀಟರ್ ಕ್ರಮಿಸಿ ಪೊದೆಯಲ್ಲಿ ಅವಿತು ಕುಳಿತಿದ್ದ ವ್ಯಕ್ತಿಯ ಮುಂದೆ ನಿಲ್ಲುತ್ತದೆ. ನಂತರ ನಮ್ಮ ಸಿಬ್ಬಂದಿ ಆತನನ್ನು ಹಿಡಿದರು".
"ವಿಚಾರಣೆ ನಡೆಸಿದಾಗ, ಸುರೇಶ್ ಎಂಬಾತನನ್ನು ಗ್ರಾಮದ ರವಿ ಎಂಬಾತ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದು ತಿಳಿಯಿತು. ಕೊಲೆಗೆ ಹಿಂದಿನ ದಿನ ರಾತ್ರಿ ಇಬ್ಬರೂ ಕುಡಿದಿದ್ದರು. ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ನಂತರ ಸುರೇಶ್ ಮನೆಗೆ ಬಂದು ಮಲಗಿದ್ದ. ಈ ವೇಳೆ ಸುರೇಶ್ನ ಮನೆಗೆ ಬಂದ ರವಿ ರಾಡ್ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾಹಿತಿ ನೀಡಿದರು.