ಕೋಲಾರ: ದಿನಸಿ ಕಿಟ್ ಹಂಚಿಕೆ ವಿಚಾರದಲ್ಲಿ ಮುಳಬಾಗಿಲು ಜೆಡಿಎಸ್ ಮುಖಂಡರಲ್ಲಿ ಭಿನ್ನಮತ ಸ್ಫೋಟಗೊಂಡು ನಗರಸಭೆ ಸದಸ್ಯನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.
ನಗರಸಭೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ಹೊರವಲಯದ ನರಸಿಂಹ ತೀರ್ಥ ಬಳಿ ಈ ಘಟನೆ ಜರುಗಿದ್ದು, ನಗರಸಭೆ ಸದಸ್ಯ ನಾಗರಾಜ್ ಗಂಭೀರವಾಗಿ ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಒಂದು ಬಣದವರು ದಿನಸಿ ಕಿಟ್ಗಳನ್ನ ಹಂಚಿಕೆ ಮಾಡಿದ್ರು. ಈ ವೇಳೆ ಫ್ಲೆಕ್ಸ್ಗಳಲ್ಲಿ ಮುಳಬಾಗಿಲು ಜೆಡಿಎಸ್ ಮುಖಂಡ ಆಲಂಗೂರು ಶ್ರೀನಿವಾಸ್ ಅವರ ಫೋಟೋ ಹಾಗೂ ಹೆಸರನ್ನ ಬಿಟ್ಟು ಕಾರ್ಯಕ್ರಮ ನಡೆಸಿದ್ರು. ಇದ್ರಿಂದ ಬೇಸರಗೊಂಡ ಇನ್ನೊಂದು ಬಣದವರು ತಮ್ಮ ಮುಖಂಡರ ಭಾವಚಿತ್ರ ಮಾತ್ರ ಹಾಕಿ ನಗರದಲ್ಲಿ ದಿನಸಿ ಕಿಟ್ಗಳನ್ನ ಹಂಚಿಕೆ ಮಾಡಿದ್ರು. ಇದ್ರಿಂದ ರೊಚ್ಚಿಗೆದ್ದ ಮತ್ತೊಂದು ಬಣದವರು, ನಿನ್ನೆ ರಾತ್ರಿ ಮಾತುಕತೆಗೆಂದು ಮುಳಬಾಗಿಲು ನಗರಸಭೆ ಸದಸ್ಯ ನಾಗರಾಜ್ ಅವರನ್ನ ನರಸಿಂಹ ತೀರ್ಥದ ಬಳಿ ಕರೆಸಿಕೊಂಡು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಾಗರಾಜ್ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಘಟನೆ ಸಂಬಂಧ ಹಲ್ಲೆ ನಡೆಸಿದ ಜೆಡಿಎಸ್ನ ಮತ್ತೊಂದು ಬಣದ ಗಂಗಾಧರ್, ಚಂದ್ರು, ನಾಗರಾಜ್ ಸೇರಿ ಐದು ಜನರ ಮೇಲೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.