ಕೋಲಾರ : ಮುಳಬಾಗಲು ಕ್ಷೇತ್ರ ಎಂದರೆ ರಾಜ್ಯದ ಘಟಾನುಘಟಿ ನಾಯಕರಿಗೆ ಅಚ್ಚುಮೆಚ್ಚು. ಕಾರಣ ರಾಜ್ಯದ ಮೂಡಣ ಬಾಗಿಲು ಎಂದು ಕರೆಯುವ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಒಂದು ನಂಬಿಕೆ ಇದೆ. ಈ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಅದೇ ಕಾರಣಕ್ಕೆ ಮೂರು ಪಕ್ಷಗಳು ಈ ಕ್ಷೇತ್ರದಲ್ಲಿ ಗೆಲುವಿಗಾಗಿ ಹೆಚ್ಚಿನ ಪೈಪೋಟಿ ನಡೆಸುತ್ತವೆ.
ಚುನಾವಣೆಗೆ ಇನ್ನು 12 ದಿನಗಳಷ್ಟೇ ಬಾಕಿ ಇರುವುದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಾರಿಕೆ ರೂಪಿಸಿದ್ದಾರೆ. ಈ ಬಾರಿ ಮುಳಬಾಗಿಲು ಕ್ಷೇತ್ರದಲ್ಲಿ ಯಾವ ಯಾವ ಪಕ್ಷದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡೋದಾದರೇ ಕಾಂಗ್ರೆಸ್ ಅಭ್ಯರ್ಥಿ ಆದಿ ನಾರಾಯಣನಿಗೆ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬಲವಿದ್ದರೆ, ಕ್ಷೇತ್ರದಲ್ಲಿ ಖಾತೆ ತೆರೆಯಲು ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಉತ್ಸಾಹದಲ್ಲಿದ್ದಾರೆ. ಇನ್ನು ಬಿಜೆಪಿಗೆ ಇಲ್ಲಿ ನೆಲೆ ಇಲ್ಲದಿದರೂ ಸಹ ಈ ಬಾರಿ ಪುಟಿದೇಳಲು ಅಭ್ಯರ್ಥಿ ಶಿಗೇಹಳ್ಳಿ ಸುಂದರ್ ಇನ್ನಿಲ್ಲದ ಕರಸತ್ತು ನಡೆಸಿದ್ದಾರೆ. ಮುಳಬಾಗಿಲಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದೆ.
ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್, ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗಿಂತ ನಾನು ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಜನರೊಟ್ಟಿಗಿದ್ದು, ಅವರ ವಿಶ್ವಾಸ ಗಳಿಸಿದ್ದೇನೆ. ಈಗಾಗಲೇ ಹೋದ ಕಡೆಯಲ್ಲೆಲ್ಲಾ ಉತ್ತಮವಾದ ವಾತಾವರಣ ಕಂಡು ಬರುತ್ತಿದೆ. ಈ ಬಾರಿ ನನ್ನ ಜನ, ನನ್ನ ಕಾರ್ಯಕರ್ತರು ನನ್ನನ್ನು ಕೈಬಿಡೋದಿಲ್ಲ ಎನ್ನುವ ವಿಶ್ವಾಸವಿದೆ. ಕಳೆದ ಚುನಾವಣೆಯಲ್ಲಿ ಸೋತಾಗಲೂ ಸಹ ನಾನು ಕುಗ್ಗದೆ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.