ಕೋಲಾರ: 5 ಕೆಜಿ ಅಕ್ಕಿಯೊಂದಿಗೆ 170 ರೂಪಾಯಿ ಕೊಡುವುದಲ್ಲ, 5 ಕೆಜಿ ಅಕ್ಕಿಯೊಂದಿಗೆ 340 ರೂಪಾಯಿ ಜನರ ಅಕೌಂಟ್ಗಳಿಗೆ ಹಾಕಬೇಕೆಂದು ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಹಿಂದೆಯೂ ಮುಖ್ಯಮಂತ್ರಿಗಳಾಗಿದ್ರು, ಈಗಲೂ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ತುಂಬಾ ಬುದ್ಧಿವಂತರು ಎಂದು ನಾನು ತಿಳಿದಿದ್ದೆ. ಆದರೆ ಕಾಂಗ್ರೆಸ್ನ ಪ್ರಣಾಳಿಕೆಗಳನ್ನ ಕಾಂಗ್ರೆಸ್ ಪಕ್ಷ ಜಾರಿ ಮಾಡಬೇಕು. ಅದು ಬಿಟ್ಟು ಬಿಜೆಪಿ ಅವರು ಮಾಡಲು ಆಗುವುದಿಲ್ಲ ಎಂದರು. ಅಲ್ಲದೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲಾ ಅವರನ್ನ ಕೇಳಿ ನೀವು ನಿರ್ಧಾರ ಮಾಡಿರುವುದು. ಮೋದಿ ಅವರನ್ನ ಕೇಳಿ ನಿರ್ಧಾರ ಮಾಡಿಲ್ಲ. ಮೋದಿ ಅವರು ನಿಮಗೆ ಮಾತು ಕೊಟ್ಟಿಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಅವರು ಬಿಟ್ಟಿ ಭಾಗ್ಯಗಳನ್ನು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಅವರ ಮೇಲೆ ಗೂಬೆ ಕೂರಿಸಿ ಇವರ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇನ್ನು ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಕೆಲ ಸರ್ಕಾರಗಳು ಉಚಿತ ಎಂದು ಕೊಟ್ಟು ಅಧೋಗತಿಗೆ ಹೋಗಿವೆ. ನಿಮ್ಮ ಆಸ್ತಿ ಎಷ್ಟಿತ್ತೊ ಅಷ್ಟೇ ಕಾಲು ಚಾಚಬೇಕಿತ್ತು ಎಂದು ಹೇಳಿದ್ರು.
ಭ್ರಷ್ಟಾಚಾರದ ಪಿತಾಮಹ ಎಂದರೆ ಅದು ಕಾಂಗ್ರೆಸ್: ಬಿಜೆಪಿಯವರ 40% ಕಮಿಷನ್ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ತನಿಖೆಯೊಂದಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ವಾಚ್ ಕೊಟ್ಟದ್ದು, ವಿಧಾನಸೌಧದಲ್ಲಿ ಹಣ ಸಿಕ್ಕಿದ್ದು, ಅರ್ಕಾವತಿ ಹಗರಣ ಎಲ್ಲವನ್ನ ತನಿಖೆ ಮಾಡಲಿ, ಭ್ರಷ್ಟಾಚಾರದ ಪಿತಾಮಹ ಎಂದರೆ ಅದು ಕಾಂಗ್ರೆಸ್ ಎಂದು ಹೇಳಿದ್ರು. ಅಲ್ಲದೆ 40% ಕಮಿಷನ್ ಎಂದು ಬಿಜೆಪಿಯವರ ಮೇಲೆ ಕಾಂಗ್ರೆಸ್ನವರು ಆರೋಪಿಸುತ್ತಿದ್ದರು. ಆದರೆ 60% ಕಮಿಷನ್ ಕಾಂಗ್ರೆಸ್ ಆಗಿದೆ ಎಂದು ಕೆಲ ಕಾಂಟ್ರಾಕ್ಟರ್ಗಳೇ ಹೇಳುತ್ತಿದ್ದಾರೆ ಎಂದರು. ಜೊತೆಗೆ 60% ಕಮಿಷನ್ ತೆಗೆದುಕೊಳ್ಳೋದಕ್ಕೆ ಸುರ್ಜೇವಾಲ ಕರೆದು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ನೀವು ಸತ್ಯ ಹರಿಶ್ಚಂದ್ರರ ತುಂಡಲ್ಲ ಎಂದು ಹೇಳಿದ್ರು.