ತಾಯಿ ಮಕ್ಕಳ ಆತ್ಮಹತ್ಯೆ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದ ಎಸ್ಪಿ ನಾರಾಯಣ್ ಕೋಲಾರ: ಅದೊಂದು ತುಂಬಿದ ಸಂಸಾರ ಅಣ್ಣ, ತಮ್ಮ, ಅಕ್ಕ, ತಂಗಿ ಎಲ್ಲರೂ ಒಟ್ಟಾಗಿ ಬದುಕುತ್ತಿದ್ದ ಸಂಸಾರ. ಹೀಗಿರುವಾಗ ಸಂಸಾರದಲ್ಲಿ ಸಣ್ಣ ಪುಟ್ಟ ಮನಸ್ಥಾಪಗಳು ಬರೋದು ಸಾಮಾನ್ಯ. ಆದರೆ ಅಲ್ಲೇನಾಗಿತ್ತೋ ಗೊತ್ತಿಲ್ಲ, ತುಂಬು ಸಂಸಾರದಲ್ಲಿದ್ದ ಆ ಮಹಿಳೆಯೊಬ್ಬಳು ಇದ್ದಕ್ಕಿದಂತೆ ತನ್ನ ಮಕ್ಕಳೊಂದಿಗೆ ಹೋಗಿ ಸಾವಿನ ಮನೆ ಸೇರಿದ್ದಾರೆ.
ಮೃತರ ಸಂಬಂಧಿಕರ ಆಕ್ರಂದನ, ಇನ್ನೊಂದೆಡೆ ಮೃತ ಮಹಿಳೆಯ ಪೊಷಕರಿಂದ ಗಂಡನ ಮನೆಯ ಮೇಲೆ ನಡೆದಿರುವ ದಾಂಧಲೆ, ಇದೆಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಚೊಕ್ಕಂಡಹಳ್ಳಿ ಗ್ರಾಮದಲ್ಲಿ. ಅಷ್ಟಕ್ಕೂ ಆಗಿದ್ದೇನು ಅಂತ ನೋಡುವುದಾದರೆ, ನಿನ್ನೆ ಸಂಜೆ ಸುಮಾರಿಗೆ ಮಾಲೂರು ದೊಡ್ಡಕೆರೆಯಲ್ಲಿ ಯಾರೋ ಅಪರಿಚಿತ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿತ್ತು. ಶವದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ರಾತ್ರಿ ವೇಳೆ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವವರು ಮಾಲೂರು ತಾಲೂಕು ಚೊಕ್ಕಂಡಹಳ್ಳಿ ಗ್ರಾಮದ ಬೇಬಿ, ಆಕೆಯ ನಾಲ್ಕು ವರ್ಷದ ಮಗಳು ದರ್ಶಿನಿ ಮತ್ತು ಒಂಬತ್ತು ತಿಂಗಳ ಛಾಯಶ್ರೀ. ಇದು ತಿಳಿದು ಬಂದ ತಕ್ಷಣ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಬಂದಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬೆಳಗ್ಗೆ 10.30 ಗಂಟೆ ಸುಮಾರಿಗೆ ತನ್ನ ಮಕ್ಕಳೊಂದಿಗೆ ಏಕಾಏಕಿ ಮನೆಯಿಂದ ಹೊರಟಿದ್ದ ಬೇಬಿ ಎಲ್ಲಿ ಹೋದಳು ಅನ್ನೋದು ಗೊತ್ತಿರಲಿಲ್ಲ. ಅವರೆಲ್ಲಾ ತವರು ಮನೆಗೆ ಹೋಗಿರಬೇಕು ಎಂದುಕೊಂಡಿದ್ದರು.
ಆದರೆ, ಸಂಜೆ ವೇಳೆ ಬೇಬಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಳೆದ 9 ವರ್ಷಗಳ ಹಿಂದೆ ಚೊಕ್ಕಂಡಹಳ್ಳಿ ಗ್ರಾಮದ ವೇಣುಗೋಪಾಲ್ಗೆ ಆಂಧ್ರದ ಕುಪ್ಪಂ ಬಳಿಯ ಪೆದ್ದೂರಿನ ಬೇಬಿ ಎಂಬ ಹುಡುಗಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳಿದ್ದರು, ವೇಣುಗೋಪಾಲ್ ಕೆ.ಆರ್.ಪುರಂನ ಕಾಲೇಜೊಂದರಲ್ಲಿ ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಿದ್ದ. ಆದರೆ, ತುಂಬು ಸಂಸಾರದಲ್ಲಿ ಚೆನ್ನಾಗಿಯೇ ಇದ್ದ ಬೇಬಿ ನಿನ್ನೆ ಏಕಾಏಕಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಏಕೆ ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ.
ಮೃತ ಬೇಬಿ ಮದುವೆಯಾಗಿ 9 ವರ್ಷವಾಗಿದೆ ಆದರೆ ಸಂಸಾರದಲ್ಲಿ ಯಾವುದೇ ಕಲಹ ಇರಲಿಲ್ಲ. ಅವಿಭಕ್ತ ಕುಟುಂಬವಾಗಿದ್ದರಿಂದ ಸಣ್ಣ ಪುಟ್ಟ ಮನಸ್ಥಾಪಗಳು ಇತ್ತೆಂದು ಹೇಳಲಾಗಿದೆ. ಹೀಗಿದ್ದರು ಬೇಬಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯ ರಾತ್ರಿ ವೇಳೆಗೆ ಮೃತ ಬೇಬಿ ಕುಟುಂಬಸ್ಥರು ಬಂದು ವೇಣುಗೋಪಾಲ್ ಮನೆಯ ಮೇಲೆ ದಾಂಧಲೆ ಮಾಡಿದ್ದಾರೆ. ಮನೆಯಲ್ಲಿದ್ದವರ ಮೇಲೆ ರಾಡ್ಗಳಿಂದ ಹಲ್ಲೆ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ವೇಣುಗೋಪಾಲ್ ಕುಟುಂಬಸ್ಥರು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ, ’’ಬೇಬಿ ಹೀಗೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ತಿಳಿದು ಬಂದಿರುವ ಅಂಶ ಎಂದರೆ ಬೇಬಿಗೆ ಎರಡನೇ ಮಗು ಆದ ಮೇಲೆ ಪತಿ ಬೇಬಿಯೊಂದಿಗೆ ಅಷ್ಟೊಂದು ಚೆನ್ನಾಗಿ ಮಾತನಾಡುತ್ತಿರಲಿಲ್ಲವಂತೆ. ಅಲ್ಲದೇ ಬೇಬಿಗೆ ತನ್ನ ತಂಗಿಯ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ನೆನೆದು ಚಿಂತೆ ಮಾಡುತ್ತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಬೇಬಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ‘‘ಎಂದುಎಸ್ಪಿ ನಾರಾಯಣ್‘ ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳಾಗಲಿಲ್ಲ ಎಂದು ಚಿತಾಭಸ್ಮ ತಿನ್ನಿಸಿದ ದುರುಳರು: ಕುಟುಂಬಸ್ಥರಿಂದಲೇ ಮಹಿಳೆಗೆ ವಾಮಾಚಾರ!