ಕೋಲಾರ :ಉಪಸಭಾಪತಿ ಎಳೆದಾಡಿದ ವಿಚಾರ ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದು ಜೆಡಿಎಸ್ ಎಂಎಲ್ಸಿ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ಪರಿಷತ್ ಫೈಟ್ ಕುರಿತಂತೆ ಎಂಎಲ್ಸಿ ಗೋವಿಂದರಾಜು ಪ್ರತಿಕ್ರಿಯೆ.. ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ರಾಜ್ಯದ ಜನರ ಮುಂದೆ ನಾವೆಲ್ಲಾ ಜನಪ್ರತಿನಿಧಿಗಳು ಕ್ಷಮೆ ಕೇಳಬೇಕು. ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ಮಾಡಲು ಅಧಿವೇಶನ ಕರೆಯಲಾಗಿತ್ತು. ಆದ್ರೆ, ಅಲ್ಲಿ ಅವಿಶ್ವಾಸ ನಿರ್ಣಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ.
ಸಮಯ ಮೀರಿದ್ರೂ ಕೂಡ ಸ್ಪೀಕರ್ ಬರಲಿಲ್ಲ. ಆದ ಕಾರಣ ಉಪಾಧ್ಯಕ್ಷರನ್ನು ಅಲ್ಲಿ ಕೂರಿಸಲು ಮುಂದಾಗಿದ್ದೆವು. ಅಷ್ಟರಲ್ಲಿ ಕಾಂಗ್ರೆಸ್ನವರು ಉಪಾಧ್ಯಕ್ಷರನ್ನ ಎಳೆದಾಡಿ, ಗೂಂಡಾವರ್ತನೆ ಪ್ರದರ್ಶನ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದರು.
ನಂತರ ಕಾಂಗ್ರೆಸ್ ಪಕ್ಷ ತಮ್ಮದೇ ಸದಸ್ಯರೊಬ್ಬರನ್ನು ಆ ಪೀಠದಲ್ಲಿ ಕೂರಿಸಿರೋದು ಸದನಕ್ಕೆ ಮಾಡಿದ ಅವಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು. ಇಂತಹ ಘಟನೆ ನಮ್ಮ ದೇಶದಲ್ಲಿಯೇ ನಡೆದಿಲ್ಲ ಎಂದ ಅವರು, ಉಪಾಧ್ಯಕ್ಷರನ್ನು ಪೀಠದಲ್ಲಿ ಕೂರಿಸಿದ್ದು, ಕಾಂಗ್ರೆಸ್ನವರಿಗೆ ಸಹಿಸಲು ಆಗದೆ ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ರೀತಿ ಸದನದಲ್ಲಿ ನಡೆದು ಕೊಂಡಿರುವುದು ಸರಿಯಲ್ಲ ಎಂದರು.