ಕೋಲಾರ:ನಿಗೂಢವಾಗಿ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ತೇರಹಳ್ಳಿ ಬೆಟ್ಟದ ಬಳಿ ನಡೆದಿದೆ.
ಡಿಸೆಂಬರ್ 2 ರಂದು ಕೋಲಾರದ ಗಾಂಧಿನಗರ ನಿವಾಸಿ ಭರತ್(20) ಸ್ಕಾಲರ್ ಶಿಪ್ಗೆ ಅರ್ಜಿ ಹಾಕಿ ಬರ್ತೀನಿ ಎಂದು ಹೇಳಿ ಹೋದವನು ಏಕಾಏಕಿ ಕಾಣಿಯಾಗಿದ್ದ. ಮನೆಯವರು ಸಂಬಂಧಿಕರ ಮನೆ, ಸ್ನೇಹಿತರ ಮನೆ ಎಲ್ಲೆಡೆ ಹುಡುಕಾಡಿದ್ದಾರೆ. ಎಲ್ಲೂ ಸಿಗದೆ ಹೋದಾಗ ಕೋಲಾರದ ಗಲ್ಪೋಟೆ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೇಂಟ್ ಕೂಡಾ ಕೊಟ್ಟಿದ್ದಾರೆ. ದೂರು ಕೊಟ್ಟು ಏಳು ದಿನವಾದರೂ ಪೊಲೀಸರಿಂದ ಕಾಣೆಯಾದವನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇಂದು ಮಧ್ಯಾಹ್ನ ಕಾಣೆಯಾಗಿದ್ದ ಭರತ್ ಮೃತದೇಹ ಕೋಲಾರ ತೇರಹಳ್ಳಿ ಬೆಟ್ಟದ ಮೇಲೆ ಪತ್ತೆಯಾಗಿದೆ.
ಮೈಮೇಲೆ ಗಾಯಗಳ ಗುರುತುಗಳಿದ್ದು, ಮೈಮೇಲಿನ ಬಟ್ಟೆಗಳನ್ನು ಹರಿದು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದರಿಂದ ಸಂಬಂಧಿಕರು ಭರತ್ನನ್ನು ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಇದಕ್ಕೆ ಪೊಲೀಸರೇ ಪರೋಕ್ಷ ಕಾರಣ ಎಂದು ಆರೋಪಿಸುತ್ತಿದ್ದಾರೆ.