ಕೋಲಾರ:ವಾಮಾಚಾರಕ್ಕಾಗಿ ಮೃತದೇಹವನ್ನು ಹೊರತೆಗೆದು ಕೂದಲು ಹಾಗು ಮಗು ಧರಿಸಿದ್ದ ಬಟ್ಟೆಯನ್ನು ತೆಗೆದುಕೊಂಡು ಹೋಗಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಕ್ರಾಸ್‌ನಲ್ಲಿ ನಡೆದಿದೆ. 20 ದಿನಗಳ ಹಿಂದೆ ಮೂರುವರೆ ವರ್ಷದ ಮಗುವಿನೊಂದಿಗೆ ಮಹಿಳೆ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದರು. ಇಬ್ಬರು ಮೃತದೇಹವನ್ನು ಹೆಬ್ಬಟ ಕ್ರಾಸ್‌ನ ಖಬರಸ್ಥಾನದಲ್ಲಿ ದಫನ ಮಾಡಲಾಗಿತ್ತು. ನವೆಂಬರ್ 19ರಂದು ದುಷ್ಕರ್ಮಿಗಳು ಮಗುವಿನ ಶವ ಹೊರತೆಗೆದು ಕೂದಲು ಹಾಗು ಮಗು ಧರಿಸಿದ್ದ ಬಟ್ಟೆಯನ್ನು ತೆಗೆದುಕೊಂಡಿದ್ದಾರೆ ಎಂದು ಮೃತಪಟ್ಟ ಮಹಿಳೆಯ ಪೋಷಕರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೃತಪಟ್ಟ ಮಹಿಳೆ ಹಮಿದಾ ಅವರ ಪತಿ ಶೋಯಬ್ ಸೂಚನೆಯಂತೆ ಮಗುವಿನ ಶವ ಹೊರತೆಗೆದು ಕೃತ್ಯವೆಸಗಿರುವ ಆರೋಪ ಮಾಡಲಾಗಿದೆ. ಸ್ಮಶಾನಕ್ಕೆ ತೆರಳಿ ಶವ ಹೊರತೆಗೆದಿದ್ದಾರೆಂದು ಶ್ರೀರಾಮ್ ಹಾಗು ನಾರಾಯಣಸ್ವಾಮಿ ಎನ್ನುವವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ನವೆಂಬರ್ 19ರಂದು ಬೆಳಗ್ಗೆ ಈ ಇಬ್ಬರು ಸ್ಮಶಾನಕ್ಕೆ ತೆರಳಿ ತಡವಾಗಿ ವಾಪಸ್ ಆಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಸಿಟಿವಿ ವಿಡಿಯೋ ಆಧರಿಸಿ ವಾಮಾಚಾರ ಮಾಡಲೆಂದು ಮಗುವಿನ ಮೃತದೇಹ ಹೊರತೆಗೆದಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಶೋಯಬ್ ನೀಡುತ್ತಿದ್ದ ವರದಕ್ಷಿಣೆ ಹಿಂಸೆ ತಾಳಲಾರದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರು ಆರೋಪ ಮಾಡಿ ದೂರು ನೀಡಿದ್ದಾರೆ. ಅದರಂತೆ ಆತ್ಮಹತ್ಯೆ ಬಳಿಕ ಪತಿ ಹೀಗೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂತ್ಯಸಂಸ್ಕಾರದ ವೇಳೆ ಶವಕ್ಕೆ ಹಾಕಿದ್ದ ಬಟ್ಟೆಗಳು ಸಮಾಧಿಯ ಪಕ್ಕದಲ್ಲಿ ಪತ್ತೆಯಾಗಿದೆ.