ಕೋಲಾರ:ವಿವಾಹಿತನೊಬ್ಬ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿ ಪರಾರಿಯಾಗಿರುವ ಬೆಚ್ಚಿಬೀಳಿಸುವ ಪ್ರಕರಣ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಬಾಲಕಿ ತಂದೆ ದೂರು ನೀಡಿದ್ದು, ಪೊಲೀಸರು ಆರೋಪಿ ಮಂಜುನಾಥ್ (27) ಪತ್ತೆ ಕಾರ್ಯ ಆರಂಭಿಸಿದ್ದಾರೆ. ಸಂತ್ರಸ್ತ ಬಾಲಕಿಯ ತಂದೆ ಮತ್ತು ತಾಯಿ 2 ದಿನದ ಹಿಂದೆ ತಮಿಳುನಾಡಿಗೆ ಹೋಗಿದ್ದರು. ಈ ವೇಳೆ ಬಾಲಕಿ ಮತ್ತು ಆಕೆಯ ತಂಗಿ ಮಾತ್ರ ಮನೆಯಲ್ಲಿದ್ದರು. ಈ ಸಂಗತಿ ತಿಳಿದಿದ್ದ ಆರೋಪಿ ಮಂಜುನಾಥ್ ಬೆಳಗ್ಗೆ ಏಕಾಏಕಿ ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ರಕ್ಷಣೆಗಾಗಿ ಚೀರಿಕೊಂಡಾಗ ಆರೋಪಿ ಆಕೆಯ ಕುತ್ತಿಗೆಗೆ ಸೀರೆ ಬಿಗಿದು ಕೊಲೆ ಮಾಡಿ ನೇಣು ಹಾಕಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.