ಕೋಲಾರ :ಸರ್ಕಾರ ಸುಭದ್ರವಾಗುತ್ತಿದಂತೆ ಸಚಿವ ನಾಗೇಶ್ ಅಲರ್ಟ್ ಆಗಿದ್ದು, ಐದಾರು ವರ್ಷಗಳಿಂದ ಬೀಗ ಹಾಕಿದ್ದ ಕಚೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಬೀಗ ಹಾಕಿದ್ದ ಕಚೇರಿಗೆ ಚಾಲನೆ ನೀಡಿದ ಸಚಿವ ನಾಗೇಶ್ ಕಳೆದ ಐದಾರು ವರ್ಷಗಳಿಂದ ಬೀಗ ಹಾಕಿದ್ದ ಕಚೇರಿಗೆ ಇಂದು ಸಚಿವ ನಾಗೇಶ್ ಭೇಟಿ ನೀಡಿ ಕೆಲಸಕ್ಕೆ ಮುಂದಾದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ರವರಿಗೆ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಗೆದ್ದಿರುವವರಿಗೆ ಮೊದಲ ಆದ್ಯತೆ, ಎಂಎಲ್ಸಿ ಮಾಡೋದಕ್ಕೂ ಕಾಲಾವಕಾಶ ಬೇಕು. ಗೆದ್ದಿರುವವರೆಲ್ಲಾ ಎಂಟಿಬಿ ಹಾಗೂ ವಿಶ್ವನಾಥ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದರು.
ನಾನು ಕೂಡಾ ಶಿಫಾರಸು ಮಾಡ್ತಿದ್ದೇನೆ. ಅವರೆಲ್ಲಾ ಸೋತರೂ ಗೆದ್ದಂತೆ. ಸರ್ಕಾರ ರಚನೆಯಾಗೋದಕ್ಕೆ ಅವರೇ ಕಾರಣ. ಹಾಗಾಗಿ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದರು.
ಇನ್ನು ಶರತ್ ವಿಚಾರವಾಗಿ ಪ್ರತಿಕ್ರಿಯಿಸಿ, ಶರತ್ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತರುವ ವಿಚಾರ ನನಗೆ ಗೊತ್ತಿಲ್ಲ. ಎಂಟಿಬಿ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಶರತ್ರವರನ್ನುಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು ಷರತ್ತು ಹಾಕಿದ್ದಾರೆ. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಶರತ್ ಬಿಟ್ಟು ಕೊಟ್ಟಿದ್ರೆ ಎಂಟಿಬಿ ಗೆದ್ದು ಮಂತ್ರಿಯಾಗುತ್ತಿದ್ದರು ಎಂದರು.
ಇನ್ನು ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿ, ಇರುವ ಹುದ್ದೆಗಳನ್ನೇ ತೆಗೆಯಲು ಚಿಂತನೆ ಇದೆ. ಹಾಗೊಂದು ವೇಳೆ ಕೊಟ್ಟರೆ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲುಗೆ ನೀಡುವ ಬಗ್ಗೆ ಚಿಂತನೆ ಇದೆ. ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸ ಅಡ್ಡಿಯಾಗಲ್ಲ. ಡಿ.22 ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದರು.