ಕೋಲಾರ :ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯ ಹೇಳಿದ್ದಕ್ಕೆ ಹೀಗೆಲ್ಲ ಆಗುತ್ತಿದೆ. ಟಿಪ್ಪುವನ್ನು ಬೆನ್ನಟ್ಟಿ ದಾಳಿ ಮಾಡಿದವರು ಮಂಡ್ಯದ ಉರಿಗೌಡ ಆದರೂ ಈ ಕುಮಾರಸ್ವಾಮಿಯವರಿಗೆ ಯಾಕೆ ಅನುಮಾನ ಎಂಬುದು ಗೊತ್ತಿಲ್ಲ. ಇತಿಹಾಸವನ್ನು ತಿರುಚುವುದಕ್ಕೆ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉರಿಗೌಡ ಹಾಗೂ ನಂಜೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಮ್ಮ ಕಂದಾಯ ಸಚಿವ ಅಶೋಕ್ ಮತ್ತು ಅಶ್ವತ್ಥನಾರಾಯಣ್ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ಬಹಳ ಸಂಶೋಧನೆ ಮಾಡಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸತ್ಯವನ್ನು ಮರೆಮಾಚಲು ಆಗಲ್ಲ. ಅವರು ಈ ಕುರಿತು ಸಂಶೋಧನೆ ಮಾಡಿಯೇ ಉರಿಗೌಡ ಟಿಪ್ಪುವನ್ನು ಕೊಂದಿದ್ದು ಎಂದು ಹೇಳಿದ್ದಾರೆ. ಇಷ್ಟು ದಿನ ಇದನ್ನು ಅವರು ಮುಚ್ಚಿಟ್ಟಿದ್ದರು. ಈಗ ಸತ್ಯ ಹೊರಗೆ ಬಂದಿದೆ. ಇದನ್ನು ತಡೆದುಕೊಳ್ಳಲು ಅವರಿಗೆ ಆಗುತ್ತಿಲ್ಲ ಎಂದರು.
ಸಚಿವ ವಿ ಸೋಮಣ್ಣ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಮುನಿರತ್ನ, ಸೋಮಣ್ಣನವರು ಬೇಜಾರಾಗಿದ್ದಾರೆ ಎಂದು ಯಾರು ಹೇಳಿದ್ದಾರೆ. ಕೆಲವೊಮ್ಮೆ ಆನಂದಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ಸೋಮಣ್ಣ ಅವರ ಪುತ್ರನ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ಏನು ಮಾತನಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋಲಾರದಲ್ಲಿ ಎಲ್ಲೂ ಕೂಡ ಸಿದ್ದರಾಮಯ್ಯ ಅಲೆ ಇಲ್ಲ. ಸಿನಿಮಾ ರೀತಿಯಲ್ಲಿ ಯಾವುದೇ ರಾಜಕಾರಣ ನಡೆಯಲ್ಲ. ಇಲ್ಲಿ ಸಿದ್ದರಾಮಯ್ಯ ಅರ್ಜುನನೂ ಅಲ್ಲ, ಮಾಜಿ ಸಚಿವ ವರ್ತೂರು ಪ್ರಕಾಶ್ ಬಬ್ರುವಾಹನ ಸಹ ಅಲ್ಲ ಎಂದು ಹೇಳಿದರು.
ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ: ಕೋಲಾರ ಹೊರ ವಲಯದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಮೈದಾನದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಉದ್ಘಾಟಿಸಿದರು. ಜಿಲ್ಲೆಯ 31 ಇಲಾಖೆಗಳಿಂದ ಸವಲತ್ತು ಪಡೆದಿರುವ ಸಾವಿರಾರು ಮಂದಿ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗಿದೆ. ಅಲ್ಲದೆ ತೋಟಗಾರಿಕೆ, ಜಿಲ್ಲಾ ಪಂಚಾಯತ್ ಸೇರಿದಂತೆ 31 ಇಲಾಖೆಗಳಿಗೆ ಸರ್ಕಾರಗಳು ಕೊಟ್ಟಿರುವ ಕೋಟ್ಯಾಂತರ ರೂಪಾಯಿ ಹಣವನ್ನು ತಲುಪಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸಗೌಡ ಅವರು ಮಾತನಾಡಿ, ವೇದಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಗುಣಗಾನ ಮಾಡಿದರು. ಕೆರೆಗಳ ಅಭಿವೃದ್ಧಿ ಮಾಡಿದ್ದು, ನೀರು ತಂದಿದ್ದು ಸಿದ್ದರಾಮಯ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ, ಶಾಸಕ ಕೆ. ಶ್ರೀನಿವಾಸ ಗೌಡ, ಸರ್ಕಾರದ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಸಾವಿರಾರು ಜನ ಫಲಾನುಭವಿಗಳು ಹಾಗೂ ಜಿಲ್ಲಾಡಳಿತ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ :ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ: ಸಿದ್ದರಾಮಯ್ಯ