ಕೋಲಾರ:ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಹರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ಜಿಲ್ಲೆಯ ಮುಳಬಾಗಿಲು ತಾಲೂಕಿನ 32 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸಚಿವರು ಚಾಲನೆ ನೀಡಿ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಹರಿಸುತ್ತೇವೆ. ಇಷ್ಟೋತ್ತಿಗಾಗಲೇ ನೀರು ಬರಬೇಕಾಗಿತ್ತು. ಆದರೆ, ಕೆಲವು ಅಡೆತಡೆಗಳಿಂದ ಕೊಂಚ ಸಮಯ ಪಡೆದಿದೆ. ಯೋಜನೆಗೆ ಇರುವ ಎಲ್ಲಾ ಅಡೆ ತಡೆಗಳು ದೂರವಾಗಿ ಯೋಜನೆ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಮಾದರಿಯಲ್ಲಿ ಬೆಂಗಳೂರು ತ್ಯಾಜ್ಯ ನೀರನ್ನು ಮತ್ತಷ್ಟು ಜಿಲ್ಲೆಗಳಿಗೆ ಹರಿಸುವ ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಹರಿಯುವ ವೃಷಭಾವತಿ ನದಿ ನೀರನ್ನು ನೆಲಮಂಗಲ, ದೊಡ್ಡಬಳ್ಳಾಪುರಕ್ಕೆ ಹರಿಸಲಾಗುತ್ತದೆ. ಈಗಾಗಲೇ 1400 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಮಂತ್ರಿಮಂಡಲದಲ್ಲಿ ಅನುಮೋದನೆ ಸಿಕ್ಕಿದೆ ಎಂದರು.