ಕೋಲಾರ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಜಿಲ್ಲೆಗೆ ಭೇಟಿ ನೀಡಿ ವಿವಿಧೆಡೆ ನರೇಗಾ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕೋಲಾರಕ್ಕೆ ಸಚಿವ ಈಶ್ವರಪ್ಪ ಭೇಟಿ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಖಾಜೀಕಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ನರೇಗಾ ಯೋಜನೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಜೊತೆಗೆ ಕೈಗಾರಿಕಾ ಪ್ರದೇಶದಲ್ಲಿರುವ ಹಿಂಗು ತೋಪು ವೀಕ್ಷಣೆ ಮಾಡಿದದರು. ನಂತರ ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ವಿವಿಧ ಯೋಜನೆಗಳ ಕುರಿತು ಚರ್ಚೆ ಮಾಡಿದರು.
ಇದೇ ವೇಳೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿವೆ. ಅಲ್ಲದೆ ಈ ಯೋಜನೆ ನರೇಗಾ ಕಾಮಗಾರಿಗಳಡಿ ನಡೆಯುತ್ತವೆ ಎಂದರು.
ರಾಜ್ಯದಲ್ಲಿ ಐದು ವರ್ಷಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿ ಇದ್ದು, ಮುಂದಿನ ಮೇ ತಿಂಗಳಲ್ಲಿ ಅಂತರ್ಜಲ ಚೇತನ ಕಾಮಗಾರಿ ಆರಂಭವಾಗುತ್ತವೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಸಲುವಾಗಿ ಬಾಕಿ ಇರುವ 46 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.