ಕೋಲಾರ: ಮೈತ್ರಿ ಸರ್ಕಾರದ ಕುರಿತು ವಿವಾದಿತ ಟ್ವೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರುಕೋಲಾರದಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಕೋಲಾರ ತಾಲೂಕಿನ ಹನುಮನಹಳ್ಳಿ, ಹುತ್ತೂರು ಸೇರಿದಂತೆ ವಿವಿಧ ಹಳ್ಳಿಗಳಿಗೆ ನಿನ್ನೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಿ ಶೋಭಾ ಕರಂದ್ಲಾಜೆ ಯಾವ ರೀತಿ ಅಂತ ಅವರ ಮಾತಿನಿಂದ ತೋರಿಸಿಕೊಟ್ಟಿದ್ದಾರೆ, ಎಲ್ಲರನ್ನು ಗೌರವದಿಂದ ಕಾಣಬೇಕಾಗಿರೋದು ನಮ್ಮ ಧರ್ಮ. ಒಂದು ಸಮುದಾಯಕ್ಕೆ ಅವಮಾನ ಆಗೋ ರೀತಿಯಲ್ಲಿ ಪದ ಬಳಸಿದ್ದಾರೆ. ಮೇಲು-ಕೀಳು ಎನ್ನುವ ಭಾವನೆಯಿಂದ ಅವರು ಇನ್ನೂ ಹೊರ ಬಂದಿಲ್ಲ, ಸಮಾನವಾಗಿ ಕಾಣೋ ಸೌಜನ್ಯ ಅವರಿಗಿಲ್ಲದೆ ಇರೋದು ದುರದೃಷ್ಟ ಎಂದರು.
ಕೋಲಾರ ತಾಲೂಕಿಗೆ ಸಚಿವ ಕೃಷ್ಣ ಭೈರೇಗೌಡ ಭೇಟಿ ಪ್ರತಿಪಕ್ಷವಾದ ಬಿಜೆಪಿಗೆ ಅಧಿಕಾರದ ಮದ ತಲೆಗೇರಿದ್ದು, ಸಾರ್ವಜನಿಕ ಜೀವನಕ್ಕೆ ಲಾಯಕಿಲ್ಲ ಅನ್ನೋ ರೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದಾರೆ. ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪರಿತಪಿಸುತ್ತಿದೆ. ಚುನಾವಣೆಯಲ್ಲಿ ಗೆಲುತ್ತಿದ್ದೇವೆ ಅಂತ ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಜನ ಇದನ್ನು ಮನ್ನಿಸೋದಿಲ್ಲ ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ಮುಂದೆ ಜನಾನೇ ಅವರ ಮದ ಇಳಿಸುತ್ತಾರೆ. ಕೈ ಮುರಿತೀವಿ, ಕಾಲು ಮುರಿತೀವಿ, ನಾಲಿಗೆ ಸೀಳ್ತಿವಿ ಅಂತ ಈ ಹಿಂದೆಯೂ ಸಹ ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ರೀತಿಯ ಹೇಳಿಕೆ ಇದೇ ಮೊದಲೇನಲ್ಲ. ಇದರಿಂದಲೇ ಬಿಜೆಪಿಯ ನಿಜವಾದ ಸಂಸ್ಕೃತಿ ಗೊತ್ತಾಗುತ್ತೆ ಎಂದು ಕಿಡಿಕಾರಿದರು.
ಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿರುವುದು ವರಿಷ್ಠರ ತೀರ್ಮಾನವಾಗಿದ್ದು, ಸಚಿವ ಸಂಪುಟ ವಿಸ್ತರಣೆ ವೇಳೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಸರಣಿ ಸಭೆಗಳನ್ನು ನಡೆಸಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ, ಈ ಕುರಿತು ವರಿಷ್ಠರಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಲ ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಆಗಿರಬಹುದು, ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗುತ್ತೆ ಎಂದು ತಿಳಿಸಿದರು.