ಕೋಲಾರ : ಜಿಲ್ಲೆಯ ಮೀನು ಸಾಕಾಣಿಕಾ ಕೇಂದ್ರಗಳಿಗೆ ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ಭೇಟಿ ನೀಡಿದರು.
ಮೊದಲಿಗೆ ಮುಳಬಾಗಲು ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಮುಳಬಾಗಲು, ಕೆಜಿಎಫ್ ತಾಲೂಕಿನ ಮೀನು ಮರಿ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪ್ರಧಾನ ಮಂತ್ರಿ ಮತ್ಸ್ಯ ಸಂಪನ್ನ ಯೋಜನೆ ಮೂಲಕ ಮೀನು ಸಾಕಾಣಿಕೆ ಮಾಡುತ್ತಿರುವ ಮುಳಬಾಗಲು ತಾಲೂಕಿನ ರೈತರಾದ ಶ್ರೀನಿವಾಸ್ ಹಾಗೂ ಆವಣಿ ಬಾಬು ಅವರ ಮೀನು ಸಾಕಾಣಿಕಾ ಕೇಂದ್ರಗಳಿಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ರೈತರು ಸ್ವಾವಲಂಬಿಗಳಾಗಿ ಆದಾಯ ಗಳಿಸಲು ಹಾಗೂ ಸ್ವ ಉದ್ಯೋಗ ಸೃಷ್ಟಿಸಲು ಇಂತಹ ಮೀನು ಉತ್ಪಾದನಾ ಘಟಕಗಳು ಅವಶ್ಯಕ. ಇದರಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಸೇರಿದಂತೆ ಆದಾಯ ಹೆಚ್ಚಾಗಲಿದೆ ಎಂದು ಹೇಳಿದರು.
ಓದಿ : ಜುಲೈ 15ರಿಂದ 2021-22ನೇ ಶೈಕ್ಷಣಿಕ ವರ್ಷ ಆರಂಭ: ಸಚಿವ ಸುರೇಶ್ಕುಮಾರ್
ಕುರುಡುಮಲೆಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡುವುದರ ಕುರಿತು ಪ್ರತಿಕ್ರಿಯಿಸಿ, ಅವರು ಯಾವ ಉದ್ದೇಶಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಏನೆಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು, ಬೇರೆ ಬೇರೆ ಭಾಗಗಳಲ್ಲಿ ಮೀನು ಸಾಕಾಣಿಕೆ ಹೇಗೆ ಮಾಡುತ್ತಾರೆ ಎಂಬುದರ ಕುರಿತು ತಿಳಿದುಕೊಳ್ಳಲು ಆಗಮಿಸಿದ್ದೇನೆ ಎಂದು ತಿಳಿಸಿದರು.