ಕೋಲಾರ: ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಎಲ್ಲಾ ರಾಜ್ಯಗಳೂ ಆನ್‌ಲೈನ್ ಶಿಕ್ಷಣ ನೀಡಬೇಕೆಂದು ಮಾರ್ಗಸೂಚಿ ನೀಡಿದೆ. ಆನ್‌ಲೈನ್ ಶಿಕ್ಷಣದಲ್ಲಿ ಮೂರು ವಿಚಾರಗಳು ಅತ್ಯಂತ ಪ್ರಮುಖವಾಗಿವೆ.
ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ, ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಹೆಚ್ಚು ಫೀಸ್ ವಸೂಲಿ ಮಾಡುತ್ತಿರುವುದು, ಲೆಕ್ಕಾಚಾರವೇ ಇಲ್ಲದೆ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದರು.
ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ರದ್ದುಪಡಿಸುವುದರ ಮೂಲಕ ಪಾಲಕರೊಂದಿಗೆ ವಾರಕ್ಕೊಮ್ಮೆ ಮಾತನಾಡಿ, ಮನೆಯಲ್ಲಿ ಯಾವ ರೀತಿ ವಿದ್ಯಾಭ್ಯಾಸ ನೀಡಬೇಕೆಂದು ತಿಳಿಸಲಾಗುವುದು. ಅಲ್ಲದೆ ಒಂದರಿಂದ ಆರನೇ ತರಗತಿವರೆಗೆ ಯಾವ ರೀತಿ ಶಿಕ್ಷಣ ನೀಡಬೇಕು, ಎಷ್ಟರ ಮಟ್ಟಿಗೆ ಶಿಕ್ಷಣ ನೀಡಬೇಕೆಂದು ನಿಗದಿಪಡಿಸಲಾಗುವುದು ಎಂದರು.
ಆನ್‌ಲೈನ್ ಶಿಕ್ಷಣವೆಂದು ಹೆಚ್ಚಿನ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ರಾಜ್ಯದಾದ್ಯಂತ ತಜ್ಞರ ಸಮಿತಿ ನೇಮಿಸಿದ್ದು, ನಮ್ಮ ರಾಜ್ಯಕ್ಕೆ ಅನುಗುಣವಾಗಿ ಆನ್‌ಲೈನ್ ಶಿಕ್ಷಣ ಹೇಗೆ ನೀಡಬಹುದು ಎಂದು ಚರ್ಚೆ ನಡೆಸಲಾಗುತ್ತಿದೆ ಎಂದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾದ್ರು ಎಂಬ ಭಾವನೆ ಬರಬಾರದು. ಆ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಲಾಗುವುದು ಎಂದರು.