ಕೋಲಾರ: ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ನೀರಿನಿಂದ ಬಂದ್ ಆಗಿವೆ. ಈ ಹಿನ್ನೆಲೆ ಟ್ರ್ಯಾಕ್ಟರ್ ಹಾಗೂ ಟೆಂಪೋಗಳಲ್ಲಿ ಜನರು ರಸ್ತೆ ದಾಟುವಂತಹ ಪರಿಸ್ಥಿತಿ ಎದುರಾಗಿದೆ. ಕೋಲಾರ ತಾಲೂಕು ಹೋಳೂರು ಹಾಗೂ ಬೆಳ್ಳಂಬರಿ ಗ್ರಾಮಗಳಿಗೆ ಸಂಪರ್ಕವಿರುವ ರಸ್ತೆಗಳು ಬಂದ್ ಆಗಿದ್ದು, ಜನರು ಪರದಾಡುವಂತಾಗಿದೆ.
ಇನ್ನು, ನಿರಂತರ ಮಳೆಯಿಂದಾಗಿ ಮುದುವಾಡಿ ಕೆರೆ ಕೋಡಿ ಹರಿಯುತ್ತಿರುವ ಪರಿಣಾಮ ಈ ಭಾಗದಲ್ಲಿರುವ ಗ್ರಾಮಗಳ ರಸ್ತೆಗಳು ಜಲಾವೃತವಾಗಿವೆ. ಈ ಮುದುವಾಡಿ ಕೆರೆ ಕೋಲಾರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆಯೇ ಕೋಡಿ ಹರಿಯುತ್ತಿದ್ದು, ನಗರಕ್ಕೆ ಹೋಗಲು ರಸ್ತೆ ಇಲ್ಲದೆ ಜನರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೆ ಗಾರ್ಮೆಂಟ್ಸ್ ಸೇರಿದಂತೆ ಬೇರೆ ಕೆಲಸಗಳಿಗೆ ಹೋಗುವ ಜನರು ಹಾಗೂ ವಿದ್ಯಾರ್ಥಿಗಳು ರಸ್ತೆ ದಾಟಲು ಪರದಾಡುತ್ತಿದ್ದು, ಟ್ರ್ಯಾಕ್ಟರ್ ಹಾಗೂ ಟೆಂಪೋಗಳ ಮೂಲಕ ರಸ್ತೆ ದಾಟುತ್ತಿರುವುದು ಕಂಡುಬಂದಿದೆ.