ಕೋಲಾರ:ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ತಮಿಳುನಾಡಿಗೆ ಮಫ್ತಿಯಲ್ಲಿ ತೆರಳಿದ್ದ ಕೋಲಾರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸೂರ್ಯಪ್ರಕಾಶ್ ನೇತೃತ್ವದ ತಂಡ ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಕವಿರಾಜ್ ವಶಕ್ಕೆ ಪಡೆಯಲು ಈಗಾಗಲೇ ಬಂಧನಕ್ಕೆ ಒಳಗಾಗಿದ್ದ ರೋಹಿತ್ನ ಸಹಾಯ ಪಡೆದುಕೊಳ್ಳಲಾಗಿತ್ತು.
ರೋಹಿತ್ ಮೂಲಕ ಕರೆ ಮಾಡಿಸಿ ಕವಿರಾಜ್ ಅವರನ್ನು ಕರೆಸಿಕೊಂಡಿದ್ದ ಪೊಲೀಸರು, ಇನ್ನೇನು ಬಂಧಿಸಬೇಕು ಎನ್ನುವಷ್ಟರಲ್ಲಿ ರೋಹಿತ್ ಕಣ್ಸನ್ನೆಯಿಂದ ತಪ್ಪಿಸಿಕೊಳ್ಳಲು ಓಡಿದ್ದ. ರಿಟ್ಜ್ ಕಾರಿನಲ್ಲಿ ಪರಾರಿಯಾದ ಕವಿರಾಜ್ನನ್ನು ಪೊಲೀಸರು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿದ್ದರು.
ಹಳ್ಳಿ ಪ್ರವೇಶಿಸಿದ ಕವಿರಾಜ್ ಕಾರು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಓಡಿಹೋಗಲು ಯತ್ನಿಸಿದ ಆತನನ್ನು ವಶಕ್ಕೆ ಪಡೆಯಲಾಯಿತು. ಆದರೆ, ಪೊಲೀಸರ ಕಾರಿನಲ್ಲಿದ್ದ ರೋಹಿತ್ ಅಲ್ಲಿಂದ ಕಾಣೆಯಾಗಿದ್ದಾನೆ. ಹೀಗಾಗಿ, ಡ್ರೋಣ್ ಕ್ಯಾಮೆರಾ ಮೂಲಕ ಆತನನ್ನು ಪತ್ತೆ ಹಚ್ಚಲಾಗುತ್ತಿದೆ.
ಕಳೆದ ನ.25ರಂದು ತಮ್ಮ ಫಾರ್ಮ್ ಹೌಸ್ನಿಂದ ಬೆಂಗಳೂರು ಕಡೆಗೆ ತೆರಳುತಿದ್ದ ವರ್ತೂರ್ ಪ್ರಕಾಶ್ ಮತ್ತು ಕಾರು ಚಾಲಕ ಸುನೀಲ್ನನ್ನು ಅಪಹರಿಸಿದ ಅಪಹರಣಾಕಾರರು ₹30 ಕೋಟಿಗೆ ಬೇಡಿಕೆ ಇಟ್ಟಿದ್ದರು. ಅವರಿಂದ ಸುನೀಲ್ ತಪ್ಪಿಸಿಕೊಂಡು ಬಂದ ಕಾರಣ ಮಾಜಿ ಸಚಿವರನ್ನು ಹೊಸಕೋಟೆಯಲ್ಲೇ ಬಿಟ್ಟು ಹೋಗಿದ್ದರು. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಆರು ತಂಡಗಳನ್ನು ರಚಿಸಲಾಗಿತ್ತು. ಇಂದು ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಸೋಮವಾರದೊಳಗೆ ಪ್ರಕರಣಕ್ಕೆ ಒಂದು ಅಂತಿಮ ರೂಪು ನೀಡುವ ಸಾಧ್ಯತೆ ಇದೆ.