ಕರ್ನಾಟಕ

karnataka

ETV Bharat / state

ಕೋಟಿಲಿಂಗೇಶ್ವರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ

ಮಹಾಶಿವರಾತ್ರಿ ಹಿನ್ನೆಲೆ ಕೋಲಾರ ಜಿಲ್ಲೆಯ ಕೆಜಿಎಫ್​ ತಾಲ್ಲೂಕಿನ ಕಮ್ಮಸಂದ್ರದ ಬಳಿ ಇರುವ ಕೋಟಿಲಿಂಗೇಶ್ವರ ಕ್ಷೇತ್ರಕ್ಕೆ ಶಿವನ ಭಕ್ತರು ತೆರಳಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಕೋಟಿಲಿಂಗೇಶ್ವರ
Mahashivaratri

By

Published : Mar 11, 2021, 7:28 PM IST

ಕೋಲಾರ:ಮಹಾಶಿವರಾತ್ರಿ ಅಂಗವಾಗಿ ಇಂದು ಕೋಟಿಲಿಂಗೇಶ್ವರದಲ್ಲಿ ಮುಂಜಾನೆಯಿಂದಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಅಲ್ಲಿನ 108 ಅಡಿಯ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಹಾಗೂ ಅಲಂಕಾರ ಮಾಡಲಾಗಿದೆ. ಜೊತೆಗೆ ಅಲ್ಲಿರುವ ಕೋಟಿ ಶಿವಲಿಂಗಗಳಿಗೂ ಅದ್ದೂರಿ ಅಲಂಕಾರ ಮಾಡಲಾಗಿದೆ.

ರಾತ್ರಿ ಜಾಗರಣೆಯ ಅಂಗವಾಗಿ ಹರಿಕಥೆ ಹಾಗೂ ಭಜನೆ ಏರ್ಪಡಿಸಲಾಗಿದೆ. ಜೊತೆಗೆ ಈ ವಿಶೇಷ ದಿನದಂದು ಲಕ್ಷಾಂತರ ಜನರು ಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಬರುವ ಭಕ್ತರೆಲ್ಲರಿಗೂ ಕಡ್ಡಾಯವಾಗಿ ಮಾಸ್ಕ್​ ಧರಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.

ಕೋಟಿಲಿಂಗೇಶ್ವರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ

ಹಬ್ಬದ ಪ್ರಯುಕ್ತ ಇಲ್ಲಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಆಂಧ್ರ, ತಮಿಳುನಾಡು, ಕೇರಳದಿಂದಲೂ ಸಾವಿರಾರು ಜನ ಭಕ್ತರು ಸಾಗರೋಪಾದಿಯಲ್ಲಿ ಕೋಟಿಲಿಂಗದರ್ಶನಕ್ಕೆ ಬರುತ್ತಾರೆ. ಇನ್ನು ಈ ವಿಶೇಷ ದಿನದಂದು ಇಚ್ಛೆಯುಳ್ಳವರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ, ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡುತ್ತಾರೆ. ಅಲ್ಲದೆ ವಿಶೇಷವಾಗಿ ಕೋಟಿಲಿಂಗೇಶ್ವರದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ಭ್ರಹ್ಮರಥೋತ್ಸವ ಕೂಡಾ ನಡೆಯುತ್ತದೆ. ಇಷ್ಟೆಲ್ಲ ಕಾರ್ಯಕ್ರಮಗಳ ನಡುವೆ ಏಕ ಕಾಲದಲ್ಲಿ ಶಿವಲಿಂಗ ದರ್ಶನ ಮಾಡುವ ಜನರಿಗಂತೂ ಭೂ ಕೈಲಾಸವೇ ಧರೆಗಿಳಿದು ಬಂದಂತಾಗಿದೆ.

ಇನ್ನು ಪತಿ ಪತ್ನಿ ಸಮೇತ ಬಂದಿದ್ದ ಜನರು ಕೋಟಿ ಶಿವಲಿಂಗಗಳ ಬಳಿ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳಂತೂ ಕಾಮನ್​ ಆಗಿ ಕಂಡುಬರುತ್ತಿತ್ತು. ಲಕ್ಷಾಂತರ ಜನರು ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ಬಂದಿದ್ದ ಭಕ್ತರೆಲ್ಲರೂ ಶಿವನಾಮ ಸ್ಮರಣೆ ಮಾಡುತ್ತಾ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.

ಒಟ್ಟಾರೆ ಕೊರೊನಾ ಆತಂಕ ದೂರವಾದ ಮೇಲೆ, ಶಿವರಾತ್ರಿ ಹಬ್ಬಕ್ಕೆ ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಬಂದು ಕೊರೊನಾ ಆತಂಕ ಮರೆತು ನೆಮ್ಮದಿಯಾಗಿ ದೇವರ ದರ್ಶನ ಪಡೆದು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ಎಂದು ಪ್ರಾರ್ಥನೆ ಮಾಡಿದರು.

ABOUT THE AUTHOR

...view details