ಕೋಲಾರ: ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ವಿಲೀನಕ್ಕೆ ಸಿದ್ಧತೆ ಆರಂಭವಾಗಿದೆ. ಇದೇ ತಿಂಗಳ ಕೊನೆಯೊಳಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆಯಾ ಅನ್ನೋ ಆತಂಕ ಇಲ್ಲಿರುವ ಪೊಲೀಸರನ್ನು ಕಾಡುತ್ತಿದೆ.
ಕೆಜಿಎಫ್‌ನಲ್ಲಿ ಜಾನ್ ಟೈಲರ್ ಅಂಡ್ ಸನ್ಸ್ ಗಣಿಗಾರಿಕೆ ಆರಂಭವಾದಾಗ ಅಂದು ಬ್ರಿಟಿಷರು ತಮ್ಮ ಸುರಕ್ಷತೆಗಾಗಿ ಸುಮಾರು 130 ವರ್ಷಗಳ ಹಿಂದೆ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲು ಇಲ್ಲಿ ಜಾರಿಗೆ ತಂದರು. ಇಡೀ ರಾಜ್ಯದಲ್ಲಿಯೇ ಕೆಜಿಎಫ್ ಪೊಲೀಸ್ ವ್ಯವಸ್ಥೆ ಪಾರಂಪರಿಕ ಹಿನ್ನೆಲೆ ಹೊಂದಿದೆ.
ಆದ್ರೆ, ಇಂತಹ ಕಚೇರಿ ಇಂದು ವಿಲೀನಕ್ಕೆ ಸಿದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಗಣಿಗಾರಿಕೆ ನಡೆಸುತ್ತಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚಿನ್ನದ ಗಣಿಗಳಲ್ಲಿ ಕಳ್ಳತನ ತಡೆಯುವುದು ಮತ್ತು ತಮ್ಮ ಭದ್ರತೆಗಾಗಿ ಬ್ರಿಟಿಷರು ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು ಎನ್ನಲಾಗ್ತಿದೆ.
ಕೆಜಿಎಫ್ ಎಸ್ಪಿ ಕಚೇರಿ :ಕೆಜಿಎಫ್‌ನಲ್ಲಿ ಮೈನಿಂಗ್ ಮತ್ತು ನಾನ್ ಮೈನಿಂಗ್ ಏರಿಯಾ ಎಂಬ ಎರಡು ಪ್ರತ್ಯೇಕ ಪ್ರದೇಶಗಳನ್ನು ಬ್ರಿಟಿಷರು ಮಾಡಿಕೊಂಡಿದ್ದರು. ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶ ಮತ್ತು ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ವಾಸಿಸುವ ಬಂಗಲೆಗಳು ಹಾಗೂ ಕೆಜಿಎಫ್ ಕ್ಲಬ್ ಸೇರಿ ನಂದಿ ದುರ್ಗ, ಮೈಸೂರು ಹಾಲ್ ಮನರಂಜನಾ ಕ್ಲಬ್ ಪ್ರದೇಶಗಳಿಗೆ ಇತರ ನಾಗರಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಅಂದಿಗೆ ಚಿನ್ನದ ಗಣಿಯ ಅಧಿಕಾರಿಯೊಬ್ಬರಿಗೆ ಪೊಲೀಸ್ ಅಧಿಕಾರ ನೀಡಲಾಗಿತ್ತು. ಅದರಂತೆ ಸ್ವಾತಂತ್ರ್ಯ ಬಂದ ಮೇಲೂ ಕೆಜಿಎಫ್ ಎಸ್ಪಿ ಕಚೇರಿ ಮುಂದುವರೆಯಿತು.
ಎಸ್ಪಿಗೆ ಮನವಿ ಸಲ್ಲಿಕೆ :ಎಸ್ಪಿ ಕಚೇರಿ ಅಲ್ಲದೇ ಕೆಜಿಎಫ್‌ನಲ್ಲಿ ಪ್ರತ್ಯೇಕ ಡಿಎಆರ್ ಸಿಬ್ಬಂದಿಯನ್ನು ಅಂದೇ ನೇಮಕ ಮಾಡಲಾಯಿತು. ಅವರಿಗಾಗಿ ಪ್ರತ್ಯೇಕ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಈಗಲೂ ಕೆಜಿಎಫ್ ಜಿಲ್ಲೆ ಎಂದು ಕರೆಯಲಾಗುತ್ತದೆ. ಹೀಗಿರುವಾಗ ಪ್ರತ್ಯೇಕವಾಗಿ ನೂತನ ವಿಜಯನಗರಕ್ಕೆ ಇಲ್ಲಿನ ಡಿಎಆರ್ ಹಾಗೂ ಡಿಸಿಆರ್‌ಬಿ ಕಚೇರಿ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರು ಕಚೇರಿಯನ್ನು ವಿಲೀನ ಮಾಡದಂತೆ ಪ್ರತಿಭಟನೆ ಮಾಡಿ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.